ADVERTISEMENT

T20: ದಕ್ಷಿಣ ಆಫ್ರಿಕಾ ವಿರುದ್ಧ ನಮೀಬಿಯಾಗೆ ಐತಿಹಾಸಿಕ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2025, 5:49 IST
Last Updated 13 ಅಕ್ಟೋಬರ್ 2025, 5:49 IST
<div class="paragraphs"><p>ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ನಮೀಬಿಯಾ</p></div>

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ನಮೀಬಿಯಾ

   

ಚಿತ್ರ ಕೃಪೆ: nbcSPORTNA

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೀಗ ತಾನೆ ಮೆಟ್ಟಿಲು ಏರುತ್ತಿರುವ ನಮೀಬಿಯಾ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ದಾಖಲೆ ಬರೆದಿದೆ. ಕೆಲವು ದಿನಗಳ ಹಿಂದೆ ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿರುವ ನಮೀಬಿಯಾ ತಂಡ ತವರಿನಲ್ಲಿ ಆಡಿದ ಏಕೈಕ ಟಿ–20 ಅಂತರರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ.

ADVERTISEMENT

ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ನಮೀಬಿಯಾ ತಂಡ ಗೆದ್ದು ದಾಖಲೆ ಬರೆದಿದೆ. ಇದುವರೆಗೂ ನಮೀಬಿಯಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪೂರ್ಣ ಸದಸ್ಯ ರಾಷ್ಟ್ರವನ್ನು 4ನೇ ಬಾರಿ ಸೋಲಿಸಿದ ದಾಖಲೆ ಮಾಡಿತು. ಇದಕ್ಕೂ ಮೊದಲು, ಐರ್ಲೆಂಡ್, ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳನ್ನು ನಮೀಬಿಯಾ ಸೋಲಿಸಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ 13 ಓವರ್‌ನ ಅಂತ್ಯಕ್ಕೆ 82 ರನ್ ಗಳಿಸಿ ತನ್ನ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಪೂರ್ಣ 20 ಓವರ್ ಆಡುವುದೇ ಅನುಮಾನ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಜೇಸನ್ ಸ್ಮಿತ್ 31 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲು ನೆರವಾದರು.

ಈ ಸುಲಭ ಗುರಿ ಬೆನ್ನಟ್ಟಿದ ನಮೀಬಿಯಾ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತ್ತಾದರೂ ಕೊನೆಯಲ್ಲಿ ಜೇನ್ ಗ್ರೀನ್ ಅಜೇಯ 30 ಹಾಗೂ ರೂಬೆನ್ ಟ್ರೂಪೆಲ್‌ಮನ್ ಅಜೇಯ 11 ರನ್‌ ಗಳಿಸಿ ಕೊನೆಯ ಎಸೆತದಲ್ಲಿ ನಮೀಬಿಯಾಗೆ ಜಯ ತಂದುಕೊಟ್ಟರು.

ಕೊನೆಯ ಓವರ್‌ನಲ್ಲಿ ಗೆಲುವು

ನಮೀಬಿಯಾ ಗೆಲುವಿಗೆ ಕೊನೆಯ ಎಸೆತದಲ್ಲಿ 11 ರನ್ ಆಗತ್ಯವಿತ್ತು. ಗ್ರೀನ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಬಳಿಕ 5 ಎಸೆತಗಳಲ್ಲಿ 5 ರನ್‌ಗಳ ಅಗತ್ಯವಿತ್ತು. ಇದರ ಹೊರತಾಗಿಯೂ ಪಂದ್ಯ ಕೊನೆಯ ಎಸೆತವನ್ನು ತಲುಪಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಗ್ರೀನ್ ಬೌಂಡರಿ ಬಾರಿಸಿ ನಮೀಬಿಯಾಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.