ADVERTISEMENT

T20 WC: ಅಭ್ಯಾಸ ಪಂದ್ಯದಲ್ಲಿ ಇಶಾನ್-ರಾಹುಲ್ ಅಬ್ಬರ; ಇಂಗ್ಲೆಂಡ್ ವಿರುದ್ಧ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2021, 18:01 IST
Last Updated 18 ಅಕ್ಟೋಬರ್ 2021, 18:01 IST
ಚಿತ್ರ ಕೃಪೆ: ಬಿಸಿಸಿಐ
ಚಿತ್ರ ಕೃಪೆ: ಬಿಸಿಸಿಐ   

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಏಳುವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಇಂಗ್ಲೆಂಡ್ ಐದು ವಿಕೆಟ್ ನಷ್ಟಕ್ಕೆ 188 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಇಶಾನ್ ಕಿಶನ್ (70) ಹಾಗೂ ಕೆ.ಎಲ್. ರಾಹುಲ್ (51) ಬಿರುಸಿನ ಅರ್ಧಶತಕಗಳ ನೆರವಿನಿಂದ 19 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಬೃಹತ್ ಗುರಿ ಬೆನ್ನತ್ತಿದ ಭಾರತಕ್ಕೆ ಕೆ.ಎಲ್. ರಾಹುಲ್ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 50 ಎಸೆತಗಳಲ್ಲಿ 82 ರನ್‌ಗಳ ಜೊತೆಯಾಟ ಕಟ್ಟಿದರು.

23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರಾಹುಲ್ ಮಿಂಚಿದರು. ಅವರ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್ ಹಾಗೂ ಆರು ಬೌಂಡರಿಗಳು ಸೇರಿದ್ದವು.

ಈ ನಡುವೆ ನಾಯಕ ವಿರಾಟ್ ಕೊಹ್ಲಿ (11) ವೈಫಲ್ಯರಾದರು. ಅತ್ತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

46 ಎಸೆತಗಳನ್ನು ಎದುರಿಸಿದ ಇಶಾನ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ನಿವೃತ್ತಿ ಹೊಂದಿದರು.

ಸೂರ್ಯಕುಮಾರ್ ಯಾದವ್ (8) ನಿರಾಸೆ ಮೂಡಿಸಿದರು. ಆದರೆ ಕೊನೆಯ ಹಂತದಲ್ಲಿ ರಿಷಭ್ ಪಂತ್ (29* ರನ್, 14 ಎಸೆತ) ಹಾಗೂ ಹಾರ್ದಿಕ್ ಪಾಂಡ್ಯ (12* ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಜಾನಿ ಬೆಸ್ಟೊ (49), ಮೊಯಿನ್ ಅಲಿ (43*) ಹಾಗೂ ಲಯಮ್ ಲಿವಿಂಗ್‌ಸ್ಟೋನ್ (30) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 188 ರನ್‌ ಗಳಿಸಿತ್ತು.

ಏಯಾನ್ ಮಾರ್ಗನ್‌ಗೆ ವಿಶ್ರಾಂತಿ ಸೂಚಿಸಿರುವ ಹಿನ್ನೆಲೆಯಲ್ಲಿ ತಂಡವನ್ನು ಜೋಸ್ ಬಟ್ಲರ್ ಮುನ್ನಡೆಸಿದರು. ನಾಯಕ ಬಟ್ಲರ್ 18, ಜೇಸನ್ ರಾಯ್ 17 ಹಾಗೂ ಡೇವಿಡ್ ಮಲನ್ 18 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮೂಯಿನ್ ಅಲಿ ಕೇವಲ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಕಬಳಿಸಿದರು. 54 ರನ್ ಬಿಟ್ಟುಕೊಟ್ಟ ಭುವನೇಶ್ವರ್ ಕುಮಾರ್ ದುಬಾರಿಯೆನಿಸಿದರು. ಭಾರತೀಯ ಬೌಲರ್‌ಗಳುಇತರೆ ರನ್ ರೂಪದಲ್ಲಿ 12 ರನ್ ಬಿಟ್ಟುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.