ADVERTISEMENT

ಮುಜೀಬ್‌ಗೆ 5 ವಿಕೆಟ್; ಸ್ಕಾಟ್ಲೆಂಡ್ 60ಕ್ಕೆ ಆಲೌಟ್; ಅಫ್ಗನ್‌ಗೆ 130 ರನ್ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2021, 17:05 IST
Last Updated 25 ಅಕ್ಟೋಬರ್ 2021, 17:05 IST
ಅಫ್ಗಾನಿಸ್ತಾನ ಆಟಗಾರರ ಸಂಭ್ರಮ
ಅಫ್ಗಾನಿಸ್ತಾನ ಆಟಗಾರರ ಸಂಭ್ರಮ   

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ಶಾರ್ಜಾದಲ್ಲಿ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅಫ್ಗಾನಿಸ್ತಾನ 130 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಬಳಿಕ ಮುಜೀಬ್ ಉರ್ ರೆಹಮಾನ್(20ಕ್ಕೆ 5) ಹಾಗೂ ರಶೀದ್ ಖಾನ್ (9ಕ್ಕೆ 4) ಸ್ಪಿನ್ ಮೋಡಿಗೆ ತತ್ತರಿಸಿದ ಸ್ಕಾಟ್ಲೆಂಡ್ 10.2 ಓವರ್‌ಗಳಲ್ಲಿ ಕೇವಲ 60 ರನ್‌ಗಳಿಗೆ ಸರ್ವಪತನವನ್ನು ಕಂಡಿತು.

20 ರನ್ ತೆತ್ತ ಮುಜೀಬ್ ಐದು ವಿಕೆಟ್ ಕಬಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ರಶೀದ್ ಖಾನ್ 9 ರನ್ನಿಗೆ ನಾಲ್ಕು ವಿಕೆಟ್ ಕಬಳಿಸಿದರು. ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸೆ ಗರಿಷ್ಠ 25 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಅಫ್ಗಾನಿಸ್ತಾನವು ಶುಭಾರಂಭ ಮಾಡಿಕೊಂಡಿದೆ. ಅತ್ತ ಅರ್ಹತಾ ಸುತ್ತಿನಲ್ಲಿ ಸತತ ಮೂರು ಗೆಲುವಿನೊಂದಿಗೆ ಸೂಪರ್-12 ಹಂತಕ್ಕೆ ಲಗ್ಗೆಯಿಟ್ಟಿರುವ ಸ್ಕಾಟ್ಲೆಂಡ್ ಸೋಲಿನ ಆಘಾತಕ್ಕೊಳಗಾಗಿದೆ.

ಅಫ್ಗಾನಿಸ್ತಾನದ ಪರ ಆರಂಭಿಕರಾದ ಹಜರತ್ ಉಲ್ಲ ಜಜಾಯ್ (44) ಹಾಗೂ ಮೊಹಮ್ಮದ್ ಶಹಜಾದ್ (22) ಮೊದಲ ವಿಕೆಟ್‌ಗೆ 35 ಎಸೆತಗಳಲ್ಲೇ 54 ರನ್‌ಗಳ ಉತ್ತಮ ಜೊತೆಯಾಟ ಕಟ್ಟಿದರು. 30 ಎಸೆತಗಳನ್ನು ಎದುರಿಸಿದ ಹಜರತ್ ಇನ್ನಿಂಗ್ಸ್‌ನಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ಬಳಿಕ ಜೊತೆಗೂಡಿದ ರಹಮಾನುಲ್ಲ ಗುರ್ಬಜ್ ಹಾಗೂ ನಜೀಬುಲ್ಲ ಜದ್ರಾನ್‌ ಮೂರನೇ ವಿಕೆಟ್‌ಗೆ ಬಿರುಸಿನ 87 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು.

ಕೇವಲ 34 ಎಸೆತಗಳನ್ನು ಎದುರಿಸಿದ ನಜೀಬುಲ್ಲ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಗುರ್ಬಜ್ 37 ಎಸೆತಗಳಲ್ಲಿ 46 (4 ಸಿಕ್ಸರ್, 1 ಬೌಂಡರಿ) ಸಿಡಿಸಿದರು. ಇನ್ನುಳಿದಂತೆ ನಾಯಕ ಮೊಹಮ್ಮದ್ ನಬಿ 11 ರನ್ ಗಳಿಸಿ ಔಟಾಗದೆ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.