ADVERTISEMENT

T20WC: ಮ್ಯಾಕ್ಸ್‌ವೆಲ್ ಕ್ಲೀನ್‌ಬೌಲ್ಡ್; ಚಾಹರ್‌ಗೆ ಅಮೂಲ್ಯ ಸಲಹೆ ನೀಡಿದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2021, 10:46 IST
Last Updated 21 ಅಕ್ಟೋಬರ್ 2021, 10:46 IST
ರಾಹುಲ್ ಚಾಹರ್ ಹಾಗೂ ವಿರಾಟ್ ಕೊಹ್ಲಿ
ರಾಹುಲ್ ಚಾಹರ್ ಹಾಗೂ ವಿರಾಟ್ ಕೊಹ್ಲಿ   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ.

ಈ ಮೂಲಕ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಭರ್ಜರಿ ಪೂರ್ವ ಸಿದ್ಧತೆಯನ್ನು ನಡೆಸಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಜಯಭೇರಿ ಮೊಳಗಿಸಿತ್ತು.

ಈ ನಡುವೆ ಆಸೀಸ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಗಳಿಸಲು ರಾಹುಲ್ ಚಾಹರ್‌ಗೆ ವಿರಾಟ್ ಕೊಹ್ಲಿ ಅಮೂಲ್ಯ ಸಲಹೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ 11 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಸ್ಟೀವ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 61 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

ಈ ನಡುವೆ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ರಾಹುಲ್ ಚಾಹರ್ ದಾಳಿಯಲ್ಲಿ ಮ್ಯಾಕ್ಸ್‌ವೆಲ್ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಬಾರಿಸಿದರು. ತಕ್ಷಣ ಚಾಹರ್ ಬಳಿ ತೆರಳಿದ ಕೊಹ್ಲಿ ಅಮೂಲ್ಯ ಸಲಹೆ ನೀಡಿದರು. ಇದಕ್ಕೆ ತಕ್ಕಂತೆ ಬೌಲಿಂಗ್ ನಡೆಸಿದ ಚಾಹರ್, ಬಳಿಕ ಮ್ಯಾಕ್ಸ್‌ವೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.

ಈ ಮೂಲಕ ಭಾರತದ ರಣನೀತಿ ಫಲಿಸಿತು. 28 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಐದು ಬೌಂಡರಿಗಳ ನೆರವಿನಿಂದ 37 ರನ್ ಗಳಿಸಿದರು.

ಪ್ರಸ್ತುತ ವಿಡಿಯೊವನ್ನು ಐಸಿಸಿ ಹಂಚಿಕೊಂಡಿದೆ. ಅಭಿಮಾನಿಗಳಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐಪಿಎಲ್‌ನಲ್ಲಿ ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಜೊತೆಯಾಗಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.