ADVERTISEMENT

T20 World Cup | ಸಂಘಟಿತ ಪ್ರದರ್ಶನ; ನೆದರ್ಲೆಂಡ್ಸ್ ಎದುರು ಭಾರತಕ್ಕೆ 56 ರನ್ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2022, 10:53 IST
Last Updated 27 ಅಕ್ಟೋಬರ್ 2022, 10:53 IST
ವಿಕೆಟ್ ಪಡೆದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಮತ್ತು ರೋಹಿತ್ ಶರ್ಮಾ (ಚಿತ್ರಕೃಪೆ: Twitter/@BCCI)
ವಿಕೆಟ್ ಪಡೆದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಮತ್ತು ರೋಹಿತ್ ಶರ್ಮಾ (ಚಿತ್ರಕೃಪೆ: Twitter/@BCCI)   

ಸಿಡ್ನಿ: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ 'ಸೂಪರ್‌ 12' ಹಂತದ ಪಂದ್ಯದಲ್ಲಿನೆದರ್ಲೆಂಡ್ಸ್‌ ಎದುರು ಸಂಘಟಿತ ಪ್ರದರ್ಶನ ತೋರಿದಭಾರತ ತಂಡ56 ರನ್ ಅಂತರದ ಜಯ ಸಾಧಿಸಿತು.

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 179 ರನ್ ಕಲೆಹಾಕಿತು.ನಾಯಕ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಿದ ಕನ್ನಡಿಗ ಕೆ.ಎಲ್‌.ರಾಹುಲ್‌ (9) ಮತ್ತೊಮ್ಮೆ ವಿಫಲರಾದರು. ಅವರು ಪಾಕಿಸ್ತಾನ ವಿರುದ್ಧದ ಕಳೆದ ಪಂದ್ಯದಲ್ಲಿ ಕೇವಲ 4 ರನ್‌ ಗಳಿಸಿ ಔಟಾಗಿದ್ದರು.

ರಾಹುಲ್‌ ಬೇಗನೆ ವಿಕೆಟ್‌ ಒಪ್ಪಿಸಿದರೂರೋಹಿತ್‌, ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಉತ್ತಮ ಬ್ಯಾಟಿಂಗ್ ನಡೆಸಿದರು. ಮೂವರೂ ತಲಾ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು.

ADVERTISEMENT

ರೋಹಿತ್ 39 ಎಸೆತಗಳಲ್ಲಿ 53 ರನ್ ಕಲೆಹಾಕಿದರೆ, ವಿರಾಟ್‌ 44 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯ ಕೇವಲ 25 ಎಸೆತಗಳಲ್ಲೇ 51 ಗಳಿಸಿ ಔಟಾಗದೆ ಉಳಿದರು.

ಕಠಿಣ ಗುರಿ ಬೆನ್ನತ್ತಿದನೆದರ್ಲೆಂಡ್ಸ್‌ಗೆ ಭಾರತದ ಬೌಲರ್‌ಗಳು ಸವಾಲಾದರು. ಕೇವಲ 20 ರನ್‌ ಗಳಿಸುವಷ್ಟರಲ್ಲಿ ಈ ತಂಡದ ಆರಂಭಿಕರಿಬ್ಬರೂ ಪೆವಿಲಿಯನ್‌ ಸೇರಿಕೊಂಡರು. ಬಳಿಕ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು, ಸ್ಟಾಕ್‌ ಎಡ್ವರ್ಡ್ಸ್‌ ಪಡೆಗೆ ಹಿನ್ನಡೆಯಾಯಿತು. ಹೀಗಾಗಿ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 123ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಳ್ಳಬೇಕಾಯಿತು.

ಭಾರತ ಪರ ಉತ್ತಮ ಬೌಲಿಂಗ್‌ ನಡೆಸಿದ ಭುವನೇಶ್ವರ್‌ ಕುಮಾರ್, ಅರ್ಷದೀಪ್‌ ಸಿಂಗ್, ರವಿಚಂದ್ರನ್ ಅಶ್ವಿನ್‌ ಮತ್ತು ಅಕ್ಷರ್‌ ಪಟೇಲ್‌ ತಲಾ ಎರಡು ವಿಕೆಟ್ ಪಡೆದರು. ಇನ್ನೊಂದು ವಿಕೆಟ್‌ ಮೊಹಮ್ಮದ್ ಶಮಿ ಪಾಲಾಯಿತು.

ಈ ಜಯದೊಂದಿಗೆ'ಸೂಪರ್‌ 12'ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ, 'ಬಿ ಗುಂಪಿನಲ್ಲಿ' ಮೊದಲ ಸ್ಥಾನಕ್ಕೇರಿತು.

ಭಾರತ ಅಕ್ಟೋಬರ್‌ 30ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮುಂದಿನ ಪಂದ್ಯ ಆಡಲಿದೆ.ನೆದರ್ಲೆಂಡ್ಸ್‌ ಪಡೆ ಅದೇ ದಿನ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.