ADVERTISEMENT

T20 WC: ‘ನಿಮಗಾಗಿ ಕಾಯುತ್ತಿದ್ದೇವೆ’: ಭಾರತ ತಂಡಕ್ಕೆ ಶೋಯಬ್ ಅಖ್ತರ್ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2022, 5:34 IST
Last Updated 10 ನವೆಂಬರ್ 2022, 5:34 IST
ಚಿತ್ರ ಕೃಪೆ: ಟ್ವಿಟ್ಟರ್ (@shoaib100mph)
ಚಿತ್ರ ಕೃಪೆ: ಟ್ವಿಟ್ಟರ್ (@shoaib100mph)   

ನವದೆಹಲಿ: ಟಿ–20 ವಿಶ್ವಕಪ್‌ ಕೂಟದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್‌, ‘ನಾವು ಮೆಲ್ಬರ್ನ್‌ಗೆ ತಲುಪಿದ್ದೇವೆ, ನಿಮಗಾಗಿ ನಾವು ಕಾಯುತ್ತಿದ್ದೇವೆ‘ ಎಂದು ಭಾರತ ತಂಡಕ್ಕೆ ಸಂದೇಶ ರವಾನಿಸಿದ್ದಾರೆ.

‘ಹಿಂದೂಸ್ತಾನ್‌, ನಾವು ಮೆಲ್ಬರ್ನ್‌ಗೆ ತಲುಪಿದ್ದೇವೆ. ನಿಮಗಾಗಿ ನಾವು ಕಾಯುತ್ತಿದ್ದೇವೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಲು ನಿಮಗೆ ಶುಭ ಕೋರುತ್ತೇನೆ‘ ಎಂದು ಅಖ್ತರ್ ಹೇಳಿದ್ದಾರೆ.

‌‘1992ರ ವಿಶ್ವಕಪ್‌ ಫೈನಲ್‌ನಲ್ಲಿ ನಾವು ಮೆಲ್ಬರ್ನ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದೆವು.ವರ್ಷ ಬದಲಾಗಿರಬಹುದು. ಆದರೆ ಸಂಖ್ಯೆಗಳು ಒಂದೇ ಇವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಫೈನಲ್‌ ನಡೆಯಲಿ ಎಂದು ನಾನು ಆಶಿಸುತ್ತೇನೆ. ನಮಗೆ ಇನ್ನೊಂದು ಪಂದ್ಯ ಬೇಕು. ಇಡೀ ಜಗತ್ತು ಉಸಿರು ಬಿಗಿ ಹಿಡಿದು ಕಾಯುತ್ತಿದೆ‘ ಎಂದು ಅಖ್ತರ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.

ಬುಧವಾರ ಸಿಡ್ನಿಯಲ್ಲಿ ನಡೆದ ಟಿ–20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು, ನ್ಯೂಜಿಲೆಂಡ್‌ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ.

ಮೊದಲ ಬ್ಯಾಟಿಂಗ್‌ ಮಾಡಿದ್ದ ನ್ಯೂಜಿಲೆಂಡ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಪಾಕಿಸ್ತಾನವು 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿ ಜಯದ ನಗೆ ಬೀರಿತು.

‌ಎರ‌ಡನೇ ಸೆಮಿಫೈನಲ್‌ ಪಂದ್ಯ ನವೆಂಬರ್‌ 10 ರಂದು ಅಡಿಲೇಡ್‌ನಲ್ಲಿ ನಡೆಯಲಿದ್ದು, ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಸೆಣಸಾಡಲಿವೆ. ಗೆಲ್ಲುವ ತಂಡ ನೆವೆಂಬರ್‌ 13 ರಂದು ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

2009ರಲ್ಲಿ ಪ್ರಶಸ್ತಿ ಗೆದ್ದಿದ್ದ ಪಾಕಿಸ್ತಾನ

2009ರಲ್ಲಿ ಪಾಕಿಸ್ತಾನವು ಟಿ–20 ವಿಶ್ವಕಪ್‌ ಗೆದ್ದಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.