ಕೀನ್ಯಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆದ ಸಂಭ್ರಮದಲ್ಲಿ ಜಿಂಬಾಂಬ್ವೆ ಆಟಗಾರರು
ಫೋಟೊ ಕೃಪೆ: ಜಿಂಬಾಂಬ್ವೆ ಕ್ರಿಕೆಟ್
ಭಾರತ ಮತ್ತು ಶ್ರೀಲಂಕಾದಲ್ಲಿ 2026ರಲ್ಲಿ ನಡೆಯಲಿರುವ ಟಿ–20 ವಿಶ್ವಕಪ್ ಟೂರ್ನಮೆಂಟ್‌ಗೆ ಜಿಂಬಾಂಬ್ವೆ ತಂಡ ಅರ್ಹತೆ ಪಡೆದುಕೊಂಡಿದೆ. ಆ ಮೂಲಕ ನಾಲ್ಕು ವರ್ಷಗಳ ಬಳಿಕ ಜಿಂಬಾಂಬ್ವೆ ತಂಡ ಈ ಪ್ರತಿಷ್ಠಿತ ಟೂರ್ನಿಗೆ ಪ್ರವೇಶ ಪಡೆದುಕೊಂಡಿದೆ.
ಟಿ–20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ 20 ತಂಡಗಳು ಭಾಗವಹಿಸಲಿವೆ. ಜಿಂಬಾಂಬ್ವೆ 17ನೇ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಇತ್ತೀಚೆಗೆ ನಮೀಬಿಯಾ ತಂಡ ತಾಂಜಾನಿಯಾವನ್ನು ಸೋಲಿಸಿ 16ನೇ ತಂಡವಾಗಿ ಟಿ–20 ವಿಶ್ವಕಪ್ ಆಡಲು ಸ್ಥಾನ ಭದ್ರಪಡಿಸಿಕೊಂಡಿತ್ತು.
ನಿನ್ನೆ (ಗುರುವಾರ) ನಡೆದ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಟಿ–20 ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯಲು ಇನ್ನೂ 3 ತಂಡಗಳಿಗೆ ಅವಕಾಶವಿದ್ದು, ಯಾವ ತಂಡಗಳು ಭಾಗವಹಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ. ಟಿ20 ವಿಶ್ವಕಪ್ 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನಡುವೆ ನಡೆಯಲಿದೆ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೀನ್ಯಾ 6 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ ಕೇವಲ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಗೆಲುವಿನೊಂದಿಗೆ ಜಿಂಬಾಬ್ವೆ 2026ರ ಟಿ–20 ವಿಶ್ವಕಪ್‌ಗೆ ಪ್ರವೇಶ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.