
ಬಾಂಗ್ಲಾ ಧ್ವಜ
ಢಾಕಾ: ಫೆಬ್ರುವರಿ 7ರಂದು ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಆಡಲು ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ಬಾಂಗ್ಲಾದೇಶ ಗುರುವಾರ ನಿರಾಕರಿಸಿದೆ.
ಭಾರತದಲ್ಲಿ ನಿಗದಿಯಾಗಿರುವ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಬಿಸಿಬಿಯ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಬುಧವಾರ ತಿರಸ್ಕರಿಸಿತ್ತು. ಅಷ್ಟೇ ಅಲ್ಲ, ಅಂತಿಮ ನಿರ್ಧಾರಕ್ಕೆ ಬರಲು ಬಿಸಿಬಿಗೆ ವಿಧಿಸಿದ್ದ ಬುಧವಾರ ಗಡುವನ್ನು ಮತ್ತೊಂದು ದಿನಕ್ಕೆ (ಗುರುವಾರದವರೆಗೆ) ವಿಸ್ತರಿಸಿತ್ತು.
ಬಾಂಗ್ಲಾದೇಶ ತಳೆದಿರುವ ಬಿಗಿಪಟ್ಟಿನ ಕಾರಣ ಈಗ ಆ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಆ ಸ್ಥಾನದಲ್ಲಿ, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗುತ್ತದೆ. ಕ್ರಮಾಂಕದಲ್ಲಿ ಸ್ಕಾಟ್ಲೆಂಡ್ ತಂಡವು, ಬಾಂಗ್ಲಾ ನಂತರದ ಕ್ರಮಾಂಕ ಹೊಂದಿದೆ.
ಬಾಂಗ್ಲಾದೇಶ ತಂಡದ ಆಟಗಾರರ ಜೊತೆ ಸಭೆ ನಡೆಸಿದ ನಂತರ ದೇಶದ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಅವರು ಈ ಕಠಿಣ ನಿಲುವು ತೆಗೆದುಕೊಂಡರು. ಭದ್ರತೆಗೆ ಸಂಬಂಧಿಸಿ ಐಸಿಸಿ ನಡೆಸಿರುವ ಮೌಲ್ಯಮಾಪನ ತಮ್ಮ ದೇಶಕ್ಕೆ ಸಮ್ಮತಾರ್ಹವಲ್ಲಎಂದೂ ಹೇಳಿದರು.
‘ನಮ್ಮ ದೇಶದ ಕ್ರಿಕೆಟಿಗರು ವಿಶ್ವಕಪ್‌ನಲ್ಲಿ ಆಡಲು ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೆ ಭಾರತದಲ್ಲಿ ಆಡುವುದಕ್ಕೆ ನಮಗಿರುವ ಭದ್ರತಾ ಕಳವಳ ಈಗಲೂ ಬದಲಾಗಿಲ್ಲ’ ಎಂದು ನಝ್ರುಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಮ್ಮ ತಂಡ, ಪತ್ರಕರ್ತರು ಮತ್ತು ಪ್ರೇಕ್ಷಕರ ಸುರಕ್ಷತೆಯನ್ನು ಅವರು (ಭಾರತ) ಖಾತರಿಪಡಿಸಬಲ್ಲರು ಎಂಬ ಬಗ್ಗೆ ನಮಗೆ ಮನವರಿಕೆಯಾಗಿಲ್ಲ. ಆದರೆ ನಾವು ಇನ್ನೂ ವಿಶ್ವಾಸ ಕಳೆದುಕೊಂಡಿಲ್ಲ. ನಮ್ಮ ತಂಡ ಸಜ್ಜಾಗಿದೆ. ಸುರಕ್ಷತೆಗೆ ಸಂಬಂಧಿಸಿದ ನಮ್ಮ ಪ್ರಾಮಾಣಿಕ ಕಳಕಳಿಯನ್ನು ಪರಿಗಣಿಸಿ ಶ್ರೀಲಂಕಾದಲ್ಲಿ ಆಡಲು ಅವಕಾಶ ನೀಡುವ ಮೂಲಕ ಐಸಿಸಿ ನ್ಯಾಯ ಒದಗಿಸುತ್ತದೆ ಎಂಬ ನಿರೀಕ್ಷೆ ನಮಗೆ ಇದೆ’ ಎಂದು ಅವರು ಹೇಳಿದರು.
ಈಗ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶ ತಂಡವು ಭಾರತದಲ್ಲಿ ನಾಲ್ಕು ಪಂದ್ಯಗಳನ್ನು (ಕೋಲ್ಕತ್ತದಲ್ಲಿ ಮೂರು ಮತ್ತು ಮುಂಬೈನಲ್ಲಿ ಒಂದು) ಆಡಬೇಕಾಗಿದೆ.
ಐಪಿಎಲ್‌ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡ ಕೈಬಿಟ್ಟ ನಂತರ ಬಾಂಗ್ಲಾದೇಶ ತಂಡವು, ಸುರಕ್ಷತೆಯ ಕಾರಣ ನೀಡಿ ಭಾರತದಲ್ಲಿ ಆಡಲು ಖ್ಯಾತೆ ತೆಗೆದಿದೆ.
‘ಆಟಗಾರರಿಗೆ ಅರ್ಥವಾಗಿದೆ’
‘ಈ ಕಗ್ಗಂಟಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪದೇ ಪದೇ ಮನವಿ ಸಲ್ಲಿಸಿದ್ದ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಅವರಿಗೆ ಸರ್ಕಾರ ಈ ನಿರ್ಧಾರಕ್ಕೆ ಬರುವ ಕಾರಣ ಏನೆಂಬುದನ್ನು ವಿವರಿಸಿದ್ದೇವೆ. ಅವರಿಗೆ ಪರಿಸ್ಥಿತಿ ಅರ್ಥವಾಗಿದೆ’ ಎಂದು ನಝ್ರುಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬಾಂಗ್ಲಾದೇಶ 20 ಕೋಟಿಗೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳಿರುವ ದೇಶ. ನಮಗೆ ಆಡುವುದಕ್ಕೆ ಅವಕಾಶ ನೀಡಲು ಐಸಿಸಿ ವಿಫಲವಾದಲ್ಲಿ ಅದು ಕ್ರಿಕೆಟ್ ವಿಶ್ವಕ್ಕೆ ನಷ್ಟ. ಆತಿಥೇಯ ದೇಶದ ವೈಫಲ್ಯ ಕೂಡ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.