
ಕರಾಚಿ: ಟಿ–20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ನಿರ್ಧಾರದ ಕುರಿತು ಪಿಸಿಬಿ ಮತ್ತು ಐಸಿಸಿ ನಡುವೆ ಇಂದು ವರ್ಚುವಲ್ ಸಭೆ ನಡೆಯಲಿದೆ.
ಪಿಸಿಬಿ ಮತ್ತು ಐಸಿಸಿ ಸಭೆಗೂ ಮುನ್ನವೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ಅಮೀನ್ ಉಲ್ ಇಸ್ಲಾಂ ಅವರು ಲಾಹೋರ್‌ಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಸಿಬಿ ಅಧ್ಯಕ್ಷ ಅಮೀನ್ ಉಲ್ ಇಸ್ಲಾಂ ಹಾಗೂ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಐಸಿಸಿ ಜತೆಗಿನ ಸಭೆಗೂ ಮುನ್ನ ಲಾಹೋರ್‌ನಲ್ಲಿ ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ ಕಾರಣಕ್ಕೆ ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟ ಐಸಿಸಿ ನಿರ್ಧಾರವನ್ನು ಪಿಸಿಬಿ ವಿರೋಧಿಸಿತ್ತು. ಇದೀಗ ರಾಜತಾಂತ್ರಿಕ ಕಾರಣದಿಂದ ಭಾರತದ ವಿರುದ್ಧ ಪಂದ್ಯವನ್ನು ಆಡುವುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸುತ್ತಿದೆ.
ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸದಂತೆ, ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಇ–ಮೇಲ್ ಮೂಲಕ ಪಿಸಿಬಿಗೆ ಮನವಿ ಮಾಡಿತ್ತು. ಅದರ ನಂತರ, ಪಾಕ್ ತನ್ನ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.
ಚುಟುಕು ವಿಶ್ವಕಪ್‌ನಲ್ಲಿ ಒಂದೇ ಗುಂಪಿನಲ್ಲಿರುವ ಭಾರತ ಮತ್ತು ಪಾಕ್ ತಂಡಗಳ ನಡುವೆ ಫೆ.15ರಂದು ಪಂದ್ಯ ನಿಗದಿಯಾಗಿದೆ. ಪಾಕ್ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.