ADVERTISEMENT

ರಾತ್ರಿ 11ಕ್ಕೆ ಕರೆ, ಇಂದು ಆತನೇ ಟೀಂ ಇಂಡಿಯಾ ಹೀರೊ: ದೇವರ ನಿರ್ಧಾರ ಎಂದ ಮಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2026, 7:22 IST
Last Updated 8 ಫೆಬ್ರುವರಿ 2026, 7:22 IST
<div class="paragraphs"><p>ಪ್ರಸಿದ್ಧಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ರವೀಂದ್ರ ಜಡೇಜ&nbsp;&nbsp;</p></div>

ಪ್ರಸಿದ್ಧಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ರವೀಂದ್ರ ಜಡೇಜ  

   

ಮುಂಬೈ: ಟಿ20 ವಿಶ್ವಕಪ್ 2026ರ ಎ ಗುಂಪಿನ ಮೊದಲ ಪಂದ್ಯದಲ್ಲಿ ಅಮೆರಿಕ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ 29 ರನ್‌ಗಳ ಗೆಲುವು ದಾಖಲಿಸಿದೆ. ವಿಶೇಷವಾಗಿ ಟೂರ್ನಿಗೆ ಆಯ್ಕೆಯಾಗದೆ ಹೊರಗುಳಿದಿದ್ದ ಸಿರಾಜ್ ಅವರು ದಿಢೀರನೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

ಮೊಹಮ್ಮದ್ ಸಿರಾಜ್ ಅವರು ಟಿ20 ವಿಶ್ವಕಪ್‌ಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ಪಂದ್ಯಾವಳಿ ಆರಂಭಕ್ಕೆ ಒಂದು ದಿನ ಮೊದಲು ಹರ್ಷಿತ್ ರಾಣಾ ಗಾಯಗೊಂಡು ಹೊರಗುಳಿದಿದ್ದರಿಂದ ಸಿರಾಜ್ ಅವರಿಗೆ ಅವಕಾಶ ನೀಡೆಲಾಯಿತು. ಸಿಕ್ಕ ಅವಕಾಶ ಬಳಸಿಕೊಂಡ ಸಿರಾಜ್, 4 ಓವರ್ ಬೌಲಿಂಗ್ ಮಾಡಿ 29 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು.

ADVERTISEMENT

ಪಂದ್ಯದ ಬಳಿಕ ಮಾತನಾಡಿದ ಸಿರಾಜ್, ಮುಂದಿನ ವಾರ (ಫೆಬ್ರುವರಿ 15) ರಿಯಲ್ ಮ್ಯಾಡ್ರಿಡ್ ಮತ್ತು ರಿಯಲ್ ಸೊಸೈಡಾಡ್ ನಡುವಿನ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಸ್ಪೇನ್‌ ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿರುವುದಾಗಿ ಮತ್ತು ಅದೇ ಸಂದರ್ಭದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಫೋನ್ ಬಂತು ಎಂದಿದ್ದಾರೆ.

‘ಎರಡು ದಿನದ ಹಿಂದೆ ಸೂರ್ಯ ಭಾಯ್ ಕರೆ ಮಾಡಿದರು. ಮಿಯಾ ಬ್ಯಾಗ್ ಪ್ಯಾಕ್ ಕರ್ ಔರ್ ಆಜಾ (ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಕೊಂಡು ಮುಂಬೈಗೆ ಬನ್ನಿ) ಎಂದರು. ನಾನು ಅವರಿಗೆ ‘ಭಾಯ್ ಮಜಾಕ್ ಮತ್ ಕರೋ ಕ್ಯೋಂ ಕಿ ಯೇ ತೊ ಹೊನೆವಾಲಾ ಹೈ ನಹೀ (ಸಹೋದರ ದಯವಿಟ್ಟು ಇದು ಆಗುವ ಮಾತಲ್ಲ. ಸುಮ್ಮನೆ ತಮಾಷೆ ಮಾಡಬೇಡಿ) ಎಂದೆ. ಅವರು ಮೈ ಸಚ್ ಕೆಹ್ ರಹಾ ಹೂಂ, ರೆಡಿ ಹೋ ಜಾ' (ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಸಿದ್ಧರಾಗಿ) ಎಂದು ಹೇಳಿದರು.

‘ನಂತರ (ಭಾರತದ ಆಯ್ಕೆಗಾರ ಪ್ರಗ್ಯಾನ್) ಓಜಾ ಭಾಯ್ ನನಗೆ ಕರೆ ಮಾಡಿದರು. ದೇವರ ನಿರ್ಧಾರವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್ ಪರ ಎರಡು ರಣಜಿ ಟ್ರೋಫಿ ಪಂದ್ಯಗಳ ಬಳಿಕ ಫೆಬ್ರುವರಿಯಲ್ಲಿ ವಿರಾಮ ಪಡೆಯಲು ನೀವು ಹೇಗೆ ಯೋಜನೆ ರೂಪಿಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಫೆ. 15ರಂದು ರಿಯಲ್ ಮ್ಯಾಡ್ರಿಡ್ ಪಂದ್ಯವಿತ್ತು, ಅದನ್ನು ವೀಕ್ಷಿಸಲು ಹೋಗುತ್ತಿದ್ದೆ. ಬಳಿಕ ರಂಜಾನ್. ಆದರೆ, ದೇವರ ನಿರ್ಧಾರ ಬೇರೆಯೇ ಇತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.