
ಕರಾಚಿ/ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ 15ರಂದು ಭಾರತದ ಎದುರಿನ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿರುವ ಪಾಕಿಸ್ತಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಲು ಅಧಿಕೃತ ಪ್ರಸಾರಕರಾದ ಜಿಯೊಸ್ಟಾರ್ ಸಿದ್ಧವಾಗಿದೆ.
ಕೊಲಂಬೊದಲ್ಲಿ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರವು ಘೋಷಿಸಿದೆ. ಆದರೆ ಪಾಕ್ ಕ್ರಿಕೆಟ್ ತಂಡವು ಇದುವರೆಗೆ ಐಸಿಸಿಗೆ ಯಾವುದೇ ವಿವರಣೆ ನೀಡಿಲ್ಲ.
ಒಂದೊಮ್ಮೆ ಪಾಕ್ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ; ಐಸಿಸಿಯು ಕಠಿಣ ಕ್ರಮಗಳನ್ನು ಜರುಗಿಸುವ ಸಾಧ್ಯತೆಗಳಿವೆ. ಪಾಕಿಸ್ತಾನಕ್ಕೆ ನೀಡಲಾಗುವ ವಾರ್ಷಿಕ ಅನುದಾನ (35 ಮಿಲಿಯನ್ ಡಾಲರ್) ವನ್ನು ತಡೆಹಿಡಿಯಲಾಗುವುದು. ಅದೇ ಮೊತ್ತದಿಂದ ಪ್ರಸಾರಕರಿಗೆ ನಷ್ಟಪರಿಹಾರ ತುಂಬಿಕೊಡುವ ಸಾಧ್ಯತೆ ಇದೆ.
‘ಪಾಕ್ ತಂಡವು ಭಾರತದ ಎದುರು ಕಣಕ್ಕಿಳಿಯದೇ ಹೋದರೆ ಭಾರಿ ಮೊತ್ತದ ದಂಡದ ಜೊತೆಗೆ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ. ಪ್ರಸಾರಕ ಸಂಸ್ಥೆಯು ಮೊಕದ್ದಮೆ ಕೂಡ ಹೂಡಬಹುದು. ಈ ವಿಷಯವಾಗಿ ಐಸಿಸಿಯ ವ್ಯಾಜ್ಯ ಪರಿಹಾರ ಸಮಿತಿ (ಡಿಆರ್‌ಸಿ) ಮುಂದೆ ಹೋಗುವುದು ಪಾಕಿಸ್ತಾನಕ್ಕೆ ಅನುಕೂಲವಾಗಲಿಕ್ಕಿಲ್ಲ’ ಎಂದು ಪಿಸಿಬಿ ಮೂಲಗಳು ಹೇಳಿವೆ.
‘ತಟಸ್ಥ ತಾಣದಲ್ಲಿ ಭಾರತ ಮತ್ತು ಪಾಕ್ ತಂಡಗಳು ಪಂದ್ಯದಲ್ಲಿ ಆಡಬೇಕಿದೆ. ಅಲ್ಲದೇ ಪಾಕ್ ತಂಡವು ವಿಶ್ವಕಪ್ ಟೂರ್ನಿಯ ತನ್ನ ಪಾಲಿನ ಎಲ್ಲ ಪಂದ್ಯಗಳನ್ನೂ ಶ್ರೀಲಂಕಾದಲ್ಲಿ ಆಡಲಿದೆ. ಅವರ (ಪಾಕ್) ಇಚ್ಛೆಗೆ ಅನುಗುಣವಾಗಿಯೇ ತಾಣಗಳನ್ನು ನಿರ್ಧರಿಸಲಾಗಿದೆ. ಪಾಕಿಸ್ತಾನ ಸರ್ಕಾರದ ಸೂಚನೆಯನ್ವಯ ಭಾರತದ ಎದುರು ಆಡದಿದ್ದರೆ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಮೂಲಗಳು ಹೇಳಿವೆ.
‘ಎರಡನೇಯದಾಗಿ; ಭಾರತದ ಸರ್ಕಾರವು ತನ್ನ ದೇಶದಲ್ಲಿ ಪಾಕ್ ತಂಡವು ಆಡಲು ಮತ್ತು ಭಾರತವು ಪಾಕಿಸ್ತಾನಕ್ಕೆ ಹೋಗಿ ಆಡಲು ಅನುಮತಿ ನೀಡಿಲ್ಲ. ಆದರೆ ತಟಸ್ಥ ತಾಣದಲ್ಲಿ ಆಡಲು ಅನುಮತಿ ಕೊಟ್ಟಿದೆ. ಆದ್ದರಿಂದ ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಉಭಯ ತಂಡಗಳು ಆಡಿವೆ’ ಎಂದು ಪಿಸಿಬಿಯ ಮೂಲಗಳು ಹೇಳಿವೆ.
‘ಐಸಿಸಿಯೊಂದಿಗೆ ಪ್ರಸಾರಕರು ನಾಲ್ಕು ವರ್ಷಗಳ ಒಪ್ಪಂದ ಮಾಡಿಕೊಂಡಿರುತ್ತದೆ. ಆ ಒಪ್ಪಂದದಲ್ಲಿ ಭಾರತ ಮತ್ತು ಪಾಕಿಸ್ತಾನ ಕೂಡ ಭಾಗಿಯಾಗಿವೆ. ಉಭಯ ದೇಶಗಳ ನಡುವಣ ಪಂದ್ಯಗಳ ಪ್ರಸಾರದ ಹಕ್ಕುಗಳಿಗೂ ಐಸಿಸಿಗೆ ಪ್ರಸಾಕರು ಹಣ ಸಂದಾಯ ಮಾಡಿರುತ್ತಾರೆ. ಅದರಿಂದಾಗಿ ಅವರು(ಪ್ರಸಾರಕರು) ಕೋರ್ಟ್‌ನಲ್ಲಿ ದಾವೆ ಹೂಡುವುದು ಕಾನೂನಿನ ಚೌಕಟ್ಟಿನೊಳಗೆ ಸೂಕ್ತವಾಗಿದೆ’ ಎಂದು ಮೂಲಗಳು ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.