ADVERTISEMENT

T20 World Cup: ವಂದತಿಗಳ ನಡುವೆಯೇ ವಿಶ್ವಕಪ್‌ಗೆ ತಂಡ ಘೋಷಿಸಿದ ಪಾಕಿಸ್ತಾನ

ಪಿಟಿಐ
Published 25 ಜನವರಿ 2026, 9:46 IST
Last Updated 25 ಜನವರಿ 2026, 9:46 IST
   

ಲಾಹೋರ್‌: ಭಾರತ ಮತ್ತು ಶ್ರೀಲಂಕಾದಲ್ಲಿ ಫೆ.7ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಟಿ–20 ವಿಶ್ವಕಪ್‌ನಲ್ಲಿ ಭಾಗವಹಿಸುವ 15 ಸದಸ್ಯರ ತಂಡವನ್ನು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್(ಪಿಸಿಬಿ) ಭಾನುವಾರ ಪ್ರಕಟಿಸಿದೆ.

ಭಾರತದ ಜಂಟಿ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾಗವಹಿಸುವ ಕುರಿತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಅನುಮಾನ ವ್ಯಕ್ತಪಡಿಸಿದ್ದರು. ಅಂತಿಮ ನಿರ್ಧಾರವನ್ನು ಪಾಕ್‌ ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರು.

‘ತಂಡವನ್ನು ಆಯ್ಕೆ ಮಾಡುವುದು ನಮ್ಮ ಕೆಲಸ, ನಾವು ಅದನ್ನು ಮಾಡಿದ್ದೇವೆ. ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಪಾಲ್ಗೊಳ್ಳುವ ಕುರಿತು ನಮ್ಮ ಸರ್ಕಾರ ನಿರ್ಧಾರ ಮಾಡುತ್ತದೆ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ’ ಎಂದು ಪಾಕ್ ಕೋಚ್ ಆಕಿಬ್ ಜಾವೇದ್ ಹೇಳಿದ್ದಾರೆ.

ADVERTISEMENT

ಸಲ್ಮಾನ್ ಅಲಿ ಅಘಾ ನಾಯಕತ್ವದ ಪಾಕಿಸ್ತಾನ ತಂಡವು, ತನ್ನ ಲೀಗ್‌ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಫೆ.7ರಂದು ಉದ್ಘಾಟನಾ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಮಾಜಿ ನಾಯಕ ಬಾಬರ್‌ ಅಜಂ, ಆಲ್‌ರೌಂಡರ್‌ ಶಾದಾಬ್ ಖಾನ್, ವೇಗಿ ನಸೀಮ್‌ ಶಾ, ಶಾಹೀನ್ ಅಫ್ರಿದಿ, ಫಖರ್ ಜಮಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಭದ್ರತಾ ಕಾರಣ ನೀಡಿ ಭಾರತದಲ್ಲಿ ಪಂದ್ಯವಾಡುವುದಕ್ಕೆ ನಿರಾಕರಿಸಿದ್ದ ಬಾಂಗ್ಲಾದೇಶ ತಂಡವನ್ನು ಐಸಿಸಿ ಟೂರ್ನಿಯಿಂದ ಹೊರಗಿಟ್ಟಿದೆ. ಬಾಂಗ್ಲಾ ಬದಲು ಸ್ಕಾಟ್ಲೆಂಡ್‌ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.

ಪಾಕಿಸ್ತಾನ ತಂಡ: ಸಲ್ಮಾನ್ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್‌ ಅಜಂ, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್‌ಜಾದಾ ಫರ್ಹಾನ್ (ವಿಕೆಟ್ ಕೀಪರ್), ಶಾಹೀನ್ ಅಫ್ರಿದಿ, ಸೈಮ್ ಅಯೂಬ್, ಶಾದಾಬ್ ಖಾನ್, ಉಸ್ಮಾನ್‌ ಖಾನ್ (ವಿಕೆಟ್ ಕೀಪರ್), ಉಸ್ಮಾನ್ ತಾರಿಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.