ADVERTISEMENT

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ: ಪಾಕಿಸ್ತಾನಕ್ಕೆ ಎರಡನೇ ಜಯ

ಹ್ಯಾರಿಸ್ ರವೂಫ್ ಬೌಲಿಂಗ್, ಶೋಯಬ್ ಮಲೀಕ್ ಮಿಂಚು

ಪಿಟಿಐ
Published 26 ಅಕ್ಟೋಬರ್ 2021, 18:17 IST
Last Updated 26 ಅಕ್ಟೋಬರ್ 2021, 18:17 IST
ಹ್ಯಾರಿಸ್ ರವೂಫ್ ಬೌಲಿಂ್  –ಎಎಫ್‌ಪಿ ಚಿತ್ರ
ಹ್ಯಾರಿಸ್ ರವೂಫ್ ಬೌಲಿಂ್  –ಎಎಫ್‌ಪಿ ಚಿತ್ರ   

ಶಾರ್ಜಾ: ಹ್ಯಾರಿಸ್ ರವೂಫ್ ಶಿಸ್ತಿನ ಬೌಲಿಂಗ್‌ ನೆರವಿನಿಂದ ಪಾಕಿಸ್ತಾನ ತಂಡವು ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದಲ್ಲಿ ಸತತ ಎರಡನೇ ಜಯ ಸಾಧಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 5 ವಿಕೆಟ್‌ಗಳಿಂದ ನ್ಯೂಜಿಲೆಂಡ್ ಎದುರು ಜಯಿಸಿತು.

ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರವೂಫ್ (22ಕ್ಕೆ4)ಅವರು ಉತ್ತಮ ಬೌಲಿಂಗ್ ಮಾಡಿದರು. ಇದರಿಂದಾಗಿ ಕಿವೀಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 134 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ ತಂಡವು 18.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 135 ರನ್ ಗಳಿಸಿತು.

ADVERTISEMENT

ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ಎದುರು ಜಯಿಸಿತ್ತು. ನ್ಯೂಜಿಲೆಂಡ್ ತಂಡವು ಕೊಟ್ಟ ಸಾಧಾರಣ ಗುರಿಯನ್ನು ಸಾಧಿಸಲು ಪಾಕ್ ತಂಡವು ಬೆವರು ಹರಿಸಬೇಕಾಯಿತು.

ಬಾಬರ್ ಆಜಂ (9) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಟಿಮ್ ಸೌಥಿ ತಮ್ಮ ತಂಡದಲ್ಲಿ ಗೆಲುವಿನ ಆಸೆ ಚಿಗುರುವಂತೆ ಮಾಡಿದರು. ಫಕ್ರ್ ಜಮಾನ್, ಸ್ಪಿನ್ನರ್ ಈಶ್ ಸೋಧಿ ಬೀಸಿದ ಎಲ್‌ಬಿಡ್ಬ್ಲುಬಲೆಗೆ ಬಿದ್ದರು. ಮೊಹಮ್ಮದ್ ಹಫೀಜ್ ಅವರ ವಿಕೆಟ್ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಪಾಲಾಯಿತು.

ಇದರಿಂದಾಗಿ ತಂಡದ ರನ್‌ ಗಳಿಕೆ ವೇಗವು ತಗ್ಗಿತು. ಒಂದು ಹಂತದಲ್ಲಿ ಪಾಕ್ ಕೈಯಿಂದ ಪಂದ್ಯ ಜಾರಿದಂತೆ ಕಂಡಿತ್ತು. ಆದರೆ, ಕೊನೆ ಐದು ಓವರ್‌ಗಳ ಆಟವೇ ಮುಖ್ಯವಾಗಿತ್ತು.

ಆದರೆ ಅನುಭವಿ ಆಟಗಾರ ಶೋಯಬ್ ಮಲಿಕ್ (ಔಟಾಗದೆ 26) ಮತ್ತು ಇಮದ್ ವಸೀಂ ( ಔಟಾಗದೆ 27) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಯಾಂಟನರ್ ಹಾಕಿದ 18ನೇ ಓವರ್‌ನಲ್ಲಿ 15 ರನ್‌ಗಳು ಹರಿದುಬಂದವು. ಶೋಯಬ್ ಒಂದು ಸಿಕ್ಸರ್ ಮತ್ತು ಬೌಂಡರಿ ದಾಖಲಿಸಿದರು. ಇದರಿಂದಾಗಿ ಕೈತಪ್ಪುವಂತಿದ್ದ ಪಂದ್ಯದ ಗೆಲುವು ಮತ್ತೆ ಪಾಕ್‌ನತ್ತ ವಾಲಿತು.

ನ್ಯೂಜಿಲೆಂಡ್ ತಂಡದ ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್ ಮೊದಲ ಐದು ಓವರ್‌ಗಳಲ್ಲಿ ತಾಳ್ಮೆಯಿಂದ ಆಡಿ 36 ರನ್ ಸೇರಿಸಿದರು. ಆರನೇ ಓವರ್‌ನಲ್ಲಿ ಗಪ್ಟಿಲ್ ವಿಕೆಟ್ ಎಗರಿಸಿದ ರವೂಫ್ ಖಾತೆ ತೆರೆದರು.

ಡೆರಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ, ಇಮದ್ ವಾಸೀಂ ಈ ಜೊತೆಯಾಟ ಬೆಳೆಯದಂತೆ ಮಾಡಿದರು. ಅವರು ಡೆರಿಲ್ ವಿಕೆಟ್ ಪಡೆದು ಜೊತೆಯಾಟವನ್ನೂ ಮುರಿದರು. ಜೇಮ್ಸ್ ನಿಶಾಮ್ ಬೇಗನೆ ಔಟಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.