ADVERTISEMENT

T20 World Cup: ದಕ್ಷಿಣ ಆಫ್ರಿಕಾ ಗೆಲುವಿಗೆ ಕಾಡಿದ ಮಳೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 21:00 IST
Last Updated 24 ಅಕ್ಟೋಬರ್ 2022, 21:00 IST
ಕ್ವಿಂಟನ್‌ ಡಿಕಾಕ್‌ ಬ್ಯಾಟಿಂಗ್‌ ವೈಖರಿ
ಕ್ವಿಂಟನ್‌ ಡಿಕಾಕ್‌ ಬ್ಯಾಟಿಂಗ್‌ ವೈಖರಿ    

ಹೋಬರ್ಟ್‌: ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಮತ್ತೆ ಮಳೆ ಅಡ್ಡಿಯಾಗಿದೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ದ ಇನ್ನೇನು ಗೆಲುವು ದಕ್ಕಿತು ಎನ್ನುವಷ್ಟರಲ್ಲಿ ಸುರಿದ ಮಳೆ, ತೆಂಬಾ ಬವುಮ ಬಳಗಕ್ಕೆ ನಿರಾಸೆ ಉಂಟುಮಾಡಿತು.

ಹೋಬರ್ಟ್‌ನಲ್ಲಿ ಸೋಮವಾರ ನಡೆದ ಪಂದ್ಯ ಮಳೆಯಿಂದ ತಡವಾಗಿ ಆರಂಭವಾಯಿತು. ಇದರಿಂದ ಓವರ್‌ ಗಳ ಸಂಖ್ಯೆಯನ್ನು 9ಕ್ಕೆ ಇಳಿಸಲಾಗಿತ್ತು.

ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 5 ವಿಕೆಟ್‌ಗೆ 79 ರನ್‌ ಗಳಿಸಿತು. ದಕ್ಷಿಣ ಆಫ್ರಿಕಾ ಇನಿಂಗ್ಸ್‌ ವೇಳೆ ಮಳೆ ಸುರಿದ ಕಾರಣ ಗೆಲುವಿಗೆ 7 ಓವರ್‌ಗಳಲ್ಲಿ 64 ರನ್‌ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು.

ADVERTISEMENT

ಆರಂಭಿಕ ಬ್ಯಾಟರ್‌ ಕ್ವಿಂಟನ್‌ ಡಿಕಾಕ್‌ (ಔಟಾಗದೆ 47, 18 ಎ., 4X8, 6X1) ಅವರ ಅಬ್ಬರದ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ 3 ಓವರ್‌ಗಳಲ್ಲಿ 51 ರನ್‌ ಕಲೆಹಾಕಿತು. ಈ ವೇಳೆ ಮತ್ತೆ ಮಳೆ ಸುರಿದ ಕಾರಣ ಅಂಪೈರ್‌ಗಳನ್ನು ಪಂದ್ಯವನ್ನು ರದ್ದುಗೊಳಿಸಿದರು. ಈ ವೇಳೆ ಗೆಲುವಿಗೆ 13 ರನ್‌ಗಳು ಬೇಕಿದ್ದವು.

1992ರ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮಳೆ ನಿರಾಸೆ ಉಂಟುಮಾಡಿತ್ತು. ಈ ಬಾರಿ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ತಂಡವನ್ನು ಮಳೆ ಕಾಡಿದೆ.

ಮೆದೆವರೆ ಆಸರೆ: ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ತಂಡ, ಲಂಗಿ ಗಿಡಿ (20ಕ್ಕೆ2) ಅವರ ಮಾರಕ ದಾಳಿಗೆ ನಲುಗಿ, 19 ರನ್‌ ಗಳಿಸುವಷ್ಟರಲ್ಲೇ ನಾಲ್ಕು ವಿಕೆಟ್‌ ಕಳೆದುಕೊಂಡಿತು. ವೆಸ್ಲಿ ಮೆದೆವೆರೆ (ಔಟಾಗದೆ 35, 18 ಎ.) ಮತ್ತು ಮಿಲ್ಟನ್‌ ಶುಂಬಾ ಅವರು ಮರುಹೋರಾಟ ನಡೆಸಿದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ 9 ಓವರ್‌ಗಳಲ್ಲಿ 5 ವಿಕೆಟ್‌ಗೆ 79 (ರೆಗಿಸ್‌ ಚಕಾಬ್ವ 8, ವೆಸ್ಲಿ ಮದೆವೆರೆ ಔಟಾಗದೆ 35, ಮಿಲ್ಟನ್‌ ಶುಂಬಾ 18, ಲುಂಗಿ ಗಿಡಿ 20ಕ್ಕೆ 2, ವೇಯ್ನ್‌ ಪಾರ್ನೆಲ್‌ 6ಕ್ಕೆ 1) ದಕ್ಷಿಣ ಆಫ್ರಿಕಾ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 51 (ಕ್ವಿಂಟನ್‌ ಡಿ ಕಾಕ್‌ ಔಟಾಗದೆ 47) ಫಲಿತಾಂಶ: ಮಳೆಯಿಂದ ಪಂದ್ಯ ರದ್ದು. ಎರಡೂ ತಂಡಗಳಿಗೆ ತಲಾ ಒಂದು
ಪಾಯಿಂಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.