ADVERTISEMENT

ಯುಎಇಯಲ್ಲಿ ಟಿ-20 ವಿಶ್ವಕಪ್: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿರ್ಧಾರ

ಬಿಸಿಸಿಐಗೆ ಈ ಕುರಿತು ಆಂತರಿಕ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 15:00 IST
Last Updated 5 ಜೂನ್ 2021, 15:00 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ನವದೆಹಲಿ (ಪಿಟಿಐ): ಭಾರತವು ಇದೇ ಅಕ್ಟೋಬರ್–ನವೆಂಬರ್‌ನಲ್ಲಿ ಆತಿಥ್ಯ ವಹಿಸಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್‌ ಅರಬ್ ಎಮಿರೇಟ್ಸ್‌ ಗೆ ಸ್ಥಳಾಂತರಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ನಿರ್ಧಾರ ಮಾಡಿದೆ. ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೂ ಆಂತರಿಕವಾಗಿ ಮಾಹಿತಿ ನೀಡಿದೆಯೆನ್ನಲಾಗಿದೆ.

ಯುಎಇಯ ಅಬುದಾಭಿ, ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿದ್ದು, ಒಮನ್‌ನ ರಾಜಧಾನಿ ಮಸ್ಕತ್‌ ಕೂಡ ನಾಲ್ಕನೇ ತಾಣವಾಗಲಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಟೂರ್ನಿ ಆರಂಭವಾಗುವುದು.

‘ಈಚೆಗೆ ಐಸಿಸಿಯ ಸಭೆಯಲ್ಲಿ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ನಡೆಸುವ ಕುರಿತು ನಿರ್ಧರಿಸಲು ಬಿಸಿಸಿಐಗೆ ನಾಲ್ಕು ವಾರಗಳ ಸಮಯಾವಕಾಶ ನೀಡಲಾಗಿದೆ. ಆದರೆ ಟೂರ್ನಿಯನ್ನು ತಟಸ್ಥ ತಾಣವಾದ ಯುಎಇಯಲ್ಲಿ ಆಯೋಜಿಸಲು ಸಿದ್ಧರಾಗಿರುವಂತೆ ಬಿಸಿಸಿಐಗೆ ಆಂತರಿಕವಾಗಿ ತಿಳಿಸಲಾಗಿದೆ‘ ಎಂದು ಮಂಡಳಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

16 ತಂಡಗಳು ಆಡುವ ಟೂರ್ನಿಯ ಪ್ರಥಮ ಹಂತರದಲ್ಲಿ ಮಸ್ಕತ್ ಬಗ್ಗೆ ಪ್ರಸ್ತಾಪವಾಗಿಲ್ಲ. ಸೆಪ್ಟೆಂಬರ್‌ನಲ್ಲಿ ಯುಎಇಯ ಮೂರು ತಾಣಗಳಲ್ಲಿ ಐಪಿಎಲ್‌ನ 31 ಪಂದ್ಯಗಳು ನಡೆಯಲಿವೆ. ಅದರ ನಂತರ ವಿಶ್ವಕಪ್ ಟೂರ್ನಿಗೆ ಆ ಮೂರು ತಾಣಗಳನ್ನು ಸಿದ್ಧಪಡಿಸಲಾಗುವುದು.

‘ಐಪಿಎಲ್ ಅಕ್ಟೋಬರ್ 10ರಂದು ಮುಕ್ತಾಯವಾಗುತ್ತದೆ. ಅದಾಗಿ ಮೂರು ವಾರಗಳ ನಂತರ ವಿಶ್ವಕಪ್ ಟೂರ್ನಿ ಆರಂಭವಾಗುತ್ತದೆ. ಈ ಅವಧಿಯಲ್ಲಿ ಪಿಚ್‌, ಕ್ರೀಡಾಂಗಣ ಸೌಲಭ್ಯಗಳನ್ನು ಸಿದ್ಧಗೊಳಿಸಲು ಐಸಿಸಿ ಯೋಜಿಸಿದೆ‘ ಎಂದು ಹೇಳಿದ್ದಾರೆ.

‘ಭಾರತದಲ್ಲಿ ಸದ್ಯ 1.20 ಲಕ್ಷ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಜೂನ್ 28ರಂದು ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸುವ ದಿನದಂದು ಎಷ್ಟು ಪ್ರಕರಣಗಳಿರುತ್ತವೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಅಲ್ಲದೇ ಈ ತಿಂಗಳು ಇದ್ದಂತಹ ಪರಿಸ್ಥಿತಿ ವಿಶ್ವಕಪ್ ಟೂರ್ನಿ ನಡೆಯುವ ಹೊತ್ತಿನಲ್ಲಿಯೂ ಇರುತ್ತದೆಯೆಂದು ಭಾವಿಸಲೂ ಸಾಧ್ಯವಿಲ್ಲ‘ ಎಂದು ಅಧಿಕಾರಿಯು ತಿಳಿಸಿದ್ದಾರೆ.

‘ಆಟಗಾರರು, ಸಿಬ್ಬಂದಿ ಮತ್ತಿತರರ ಆರೋಗ್ಯ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿದೆ. ಆದ್ದರಿಂದ ಐಸಿಸಿಯು ಈಗಾಗಲೇ ಟೂರ್ನಿಯನ್ನು ಯುಎಇಯಲ್ಲಿ ನಡೆಸುವ ಕುರಿತು ನಿರ್ಧಾರ ಕೈಗೊಂಡಿರಬಹುದು‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.