ADVERTISEMENT

T20 World Cup: ಅಮೆರಿಕಕ್ಕೆ ಸತತ ಎರಡನೇ ಜಯ; ನಮೀಬಿಯಾಗೆ ಹ್ಯಾಟ್ರಿಕ್‌ ಸೋಲು

ಪಿಟಿಐ
Published 15 ಫೆಬ್ರುವರಿ 2026, 16:19 IST
Last Updated 15 ಫೆಬ್ರುವರಿ 2026, 16:19 IST
<div class="paragraphs"><p>ಅಜೇಯ ಅರ್ಧಶತಕ ದಾಖಲಿಸಿದ ಸಂಜಯ್‌ ಕೃಷ್ಣಮೂರ್ತಿ</p></div>

ಅಜೇಯ ಅರ್ಧಶತಕ ದಾಖಲಿಸಿದ ಸಂಜಯ್‌ ಕೃಷ್ಣಮೂರ್ತಿ

   

–ಪಿಟಿಐ ಚಿತ್ರ

ಚೆನ್ನೈ: ಸಂಜಯ್‌ ಕೃಷ್ಣಮೂರ್ತಿ ಮತ್ತು ನಾಯಕ ಮೊನಾಂಕ್‌ ಪಟೇಲ್‌ ಅವರ ಅರ್ಧಶತಕಗಳ ನೆರವಿನಿಂದ ಅಮೆರಿಕ ತಂಡವು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ಇದರೊಂದಿಗೆ ಸೂಪರ್‌ ಎಂಟರ ಕನಸನ್ನು ಜೀವಂತವಾಗಿರಿಸಿಕೊಂಡಿತು.

ADVERTISEMENT

ಚೆಪಾಕ್‌ನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಮೆರಿಕ ತಂಡವು 31 ರನ್‌ಗಳಿಂದ ನಮೀಬಿಯಾ ತಂಡವನ್ನು ಮಣಿಸಿತು. ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಗೆದ್ದ ಅಮೆರಿಕ ತಂಡವು ಗುಂಪು ಹಂತದ ಅಭಿಯಾನ ಮುಗಿಸಿತು. ಸೂಪರ್‌ ಎಂಟರ ಘಟ್ಟದ ಅವಕಾಶ ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಅಮೆರಿಕ ತಂಡವು ಮೊನಾಂಕ್‌ (52;30ಎ, 4x3, 6x3) ಮತ್ತು ಸಂಜಯ್‌ (ಔಟಾಗದೇ 68;33ಎ, 4x4, 6x6) ಅವರ ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 199 ರನ್‌ ಗಳಿಸಿತು.

ಗುರಿಯನ್ನು ಬೆನ್ನಟ್ಟಿದ ನಮೀಬಿಯಾ ತಂಡವು ಲಾರೆನ್ ಸ್ಟೀನ್‌ಕ್ಯಾಂಪ್ (58;39ಎ, 4x5, 6x3) ಅವರ ಅರ್ಧಶತಕದ ಹೊರತಾಗಿಯೂ 6 ವಿಕೆಟ್‌ಗೆ 168 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಅನನುಭವಿ ನಮೀಬಿಯಾ ತಂಡಕ್ಕೆ ಇದು ಹ್ಯಾಟ್ರಿಕ್‌ ಸೋಲು. 

ಮೊನಾಂಕ್‌ ಮತ್ತು ಶಯಾನ್ ಜಹಾಂಗೀರ್ (22) ಅವರು ಮೊದಲ ವಿಕೆಟ್‌ಗೆ 68 ರನ್‌ ಸೇರಿಸಿ ಅಮೆರಿಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ತಳಹದಿಯ ಮೇಲೆ ಸಂಜಯ್‌ ಮತ್ತು ಮಿಲಿಂದ್‌ ಕುಮಾರ್ (28) ಇನಿಂಗ್ಸ್ ಕಟ್ಟಿದರು. ಅವರು ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 87 (47ಎ) ರನ್‌ ಸೇರಿಸಿ ತಂಡವನ್ನು ಇನ್ನೂರ ಸನಿಹ ಕೊಂಡೊಯ್ದರು.

ನಮೀಬಿಯಾ ತಂಡದ ಆರಂಭವೂ ಚೇತೋಹಾರಿಯಾಗಿತ್ತು. ಆರಂಭಿಕ ಜೋಡಿ ಲಾರೆನ್ ಮತ್ತು ಜಾನ್ ಫ್ರೈಲಿಂಕ್ (19) ಮೊದಲ ವಿಕೆಟ್‌ಗೆ 54 ರನ್‌ ಸೇರಿಸಿತು. ನಂತರದಲ್ಲಿ ನಿಯಮಿತವಾಗಿ ವಿಕೆಟ್‌ಗಳು ಉರುಳಿದವು. ಜೆ.ಜೆ.ಸ್ಮಿತ್‌ (31) ಮತ್ತು ಜಾನ್ ನಿಕೋಲ್ ಲೋಫ್ಟಿ ಈಟೊನ್ (28) ಕೊಂಚ ಪ್ರತಿರೋಧ ತೋರಿದರೂ ಗೆಲುವಿಗೆ ಸಾಕಾಗಲಿಲ್ಲ. ಅಮೆರಿಕದ ಮಧ್ಯಮ ವೇಗಿ ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ ಎರಡು ವಿಕೆಟ್‌ ಪಡೆದರು. 

ಸಂಕ್ಷಿಪ್ತ ಸ್ಕೋರು

ಅಮೆರಿಕ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 199 (ಮೊನಾಂಕ್‌ ಪಟೇಲ್‌ 52, ಸಂಜಯ್‌ ಕೃಷ್ಣಮೂರ್ತಿ ಔಟಾಗದೇ 68; ವಿಲಿಯಮ್ ಮೈಬರ್ಗ್ 22ಕ್ಕೆ 2).

ನಮೀಬಿಯಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 (ಲಾರೆನ್ ಸ್ಟೀನ್‌ಕ್ಯಾಂಪ್ 58, ಜೆ.ಜೆ.ಸ್ಮಿತ್‌ 31; ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ 30ಕ್ಕೆ 2).

ಪಂದ್ಯದ ಆಟಗಾರ: ಸಂಜಯ್‌ ಕೃಷ್ಣಮೂರ್ತಿ

ಅಜೇಯ ಅರ್ಧಶತಕ ದಾಖಲಿಸಿದ ಸಂಜಯ್‌ ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.