ADVERTISEMENT

ಟಿ20 ವಿಶ್ವಕಪ್: ‘ಸೂಪರ್‌ 8‘ ಹಂತಕ್ಕೆ ವೆಸ್ಟ್‌ ಇಂಡೀಸ್‌ ಲಗ್ಗೆ

ಹೋಲ್ಡರ್‌ಗೆ 4 ವಿಕೆಟ್‌; ಹೋಪ್‌– ಹೆಟ್ಮೇಯರ್‌ ಅಮೋಘ ಜೊತೆಯಾಟ

ಪಿಟಿಐ
Published 15 ಫೆಬ್ರುವರಿ 2026, 15:49 IST
Last Updated 15 ಫೆಬ್ರುವರಿ 2026, 15:49 IST
<div class="paragraphs"><p>ನಾಲ್ಕು ವಿಕೆಟ್‌ ಪಡೆದ ಜೇಸನ್‌ ಹೋಲ್ಡರ್‌ </p></div>

ನಾಲ್ಕು ವಿಕೆಟ್‌ ಪಡೆದ ಜೇಸನ್‌ ಹೋಲ್ಡರ್‌

   

–ಪಿಟಿಐ ಚಿತ್ರ

ಮುಂಬೈ: ವೆಸ್ಟ್ ಇಂಡೀಸ್ ತಂಡವು ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 8ರ ಹಂತಕ್ಕೆ ಪ್ರವೇಶಿಸಿತು. 

ADVERTISEMENT

ಭಾನುವಾರ ನಡೆದಿ ಪಂದ್ಯದಲ್ಲಿ ವಿಂಡೀಸ್ ಬಳಗವು 9 ವಿಕೆಟ್‌ಗಳಿಂದ ನೇಪಾಳ ತಂಡವನ್ನು ನಿರಾಯಾಸವಾಗಿ ಮಣಿಸಿತು. ಹ್ಯಾಟ್ರಿಕ್‌ ಗೆಲುವಿನೊಂದಿಗೆ ಶಾಯ್‌ ಹೋಪ್‌ ಬಳಗ ಸೂಪರ್‌ ಎಂಟರ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಟಾಸ್‌ ಗೆದ್ದ ಹೋಪ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ವೆಸ್ಟ್‌ ಇಂಡೀಸ್‌ ಬೌಲರ್‌ಗಳು ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದರು. ಬಲಗೈ ವೇಗಿ ಮ್ಯಾಥ್ಯೂ ಫೋರ್ಡ್‌ 4 ಓವರ್‌ಗಳಲ್ಲಿ ಕೇವಲ 10 ರನ್‌ ನೀಡಿ ಕಡಿವಾಣ ಹಾಕಿದರೆ, ಅನುಭವಿ ವೇಗಿ ಜೇಸನ್‌ ಹೋಲ್ಡರ್‌ (27ಕ್ಕೆ4) ನೇಪಾಳ ತಂಡದ ಕುಸಿತಕ್ಕೆ ಕಾರಣರಾದರು.

ನಿರಂತರವಾಗಿ ವಿಕೆಟ್‌ ಉರುಳುತ್ತಿದ್ದರೂ ಛಲಬಿಡದೆ ಆಡಿದ ದೀಪೇಂದ್ರ ಸಿಂಗ್ ಐರೀ (58; 47ಎ, 4x3, 6x3) ಅರ್ಧಶತಕ ಗಳಿಸಿದರು. ಕೊನೆಯಲ್ಲಿ ಸೋಮಪಾಲ್‌ ಕಮಿ (ಔಟಾಗದೇ 26; 15ಎ, 4x4) ಬಿರುಸಿನ ಬ್ಯಾಟಿಂಗ್‌ ಆಡಿದರು. ನೇಪಾಳ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 133 ರನ್‌ ಗಳಿಸಿತು.

ನಾಯಕ ಹೋಪ್‌ (ಔಟಾಗದೇ 61; 44ಎ, 4x5, 6x3) ಹಾಗೂ ಶಿಮ್ರೋನ್ ಹೆಟ್ಮೇಯರ್ (ಔಟಾಗದೇ 46; 32ಎ, 4x4, 6x2) ಅವರ ಮುರಿಯದ 91(59ಎ) ರನ್‌ ಜೊತೆಯಾಟದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡವು ಇನ್ನೂ 28 ಎಸೆತಗಳಿರುವಂತೆಯೇ ಗುರಿ ಮುಟ್ಟಿತು.

ನೇಪಾಳ ತಂಡವು ಸತತ ಮೂರು ಸೋಲುಗಳೊಂದಿಗೆ ಸೂಪರ್‌ 8ರ ಪೈಪೋಟಿಯಿಂದ ಹೊರಬಿತ್ತು. ರೋಹಿತ್‌ ಪೌಡೆಲ್‌ ಪಡೆಯು ‘ಔಪಚಾರಿಕ’ವಾದ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ (ಫೆ.17) ಸ್ಕಾಟ್ಲೆಂಡ್‌ ಅನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು

ನೇಪಾಳ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 133 (ದೀಪೇಂದ್ರ ಸಿಂಗ್ ಐರೀ 58, ಸೋಮಪಾಲ್‌ ಕಮಿ ಔಟಾಗದೇ 26; ಜೇಸನ್‌ ಹೋಲ್ಡರ್‌ 27ಕ್ಕೆ4, ಮ್ಯಾಥ್ಯೂ ಫೋರ್ಡ್‌ 10ಕ್ಕೆ1)

ವೆಸ್ಟ್‌ ಇಂಡೀಸ್‌: 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 134 (ಶಾಯ್‌ ಹೋಪ್‌ ಔಟಾಗದೇ 61, ಶಿಮ್ರೋನ್‌ ಹೆಟ್ಮೇಯರ್‌ ಔಟಾಗದೇ 46; ನಂದನ್‌ ಯಾದವ್‌ 24ಕ್ಕೆ1)

ಪಂದ್ಯದ ಆಟಗಾರ: ಜೇಸನ್‌ ಹೋಲ್ಡರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.