ADVERTISEMENT

T20WC ಕರ್ಟಿಸ್ ಕ್ಯಾಂಪರ್ 'ಮ್ಯಾಜಿಕ್'; ನೆದರ್ಲೆಂಡ್ಸ್ ವಿರುದ್ಧ ಐರ್ಲೆಂಡ್‌ಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2021, 13:25 IST
Last Updated 18 ಅಕ್ಟೋಬರ್ 2021, 13:25 IST
ಸಹ ಆಟಗಾರರೊಂದಿಗೆ ಸಂಭ್ರಮಿಸುತ್ತಿರುವ ಕರ್ಟಿಸ್ ಕ್ಯಾಂಪರ್
ಸಹ ಆಟಗಾರರೊಂದಿಗೆ ಸಂಭ್ರಮಿಸುತ್ತಿರುವ ಕರ್ಟಿಸ್ ಕ್ಯಾಂಪರ್   

ಅಬುಧಾಬಿ: 'ಹ್ಯಾಟ್ರಿಕ್' ಸೇರಿದಂತೆ ಸತತ ನಾಲ್ಕು ವಿಕೆಟ್ ಕಬಳಿಸಿರುವ ಕರ್ಟಿಸ್ ಕ್ಯಾಂಪರ್ ಮಾರಕ ದಾಳಿಯ (26ಕ್ಕೆ 4 ವಿಕೆಟ್) ನೆರವಿನಿಂದ ಐರ್ಲೆಂಡ್ ತಂಡವು ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೋಮವಾರ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಅಬುಧಾಬಿಯಲ್ಲಿ 'ಎ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್, ಓಪನರ್ ಮ್ಯಾಕ್ಸ್ ಒಡೌಡ್ ಅರ್ಧಶತಕದ (51) ಹೊರತಾಗಿಯೂ 20 ಓವರ್‌ಗಳಲ್ಲಿ 106 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಕರ್ಟಿಸ್ ಕ್ಯಾಂಪರ್, ಮಾರಕ ದಾಳಿ ಸಂಘಟಿಸಿದರು. ಕ್ಯಾಂಪರ್‌ಗೆ ತಕ್ಕ ಸಾಥ್ ನೀಡಿದ ಮಾರ್ಕ್ ಅದೇರ್ ಮೂರು ವಿಕೆಟ್ ಪಡೆದು ಮಿಂಚಿದರು. ಪರಿಣಾಮ ನೆದರ್ಲೆಂಡ್ಸ್‌ನ ಐವರು ಬ್ಯಾಟರ್‌ಗಳು ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಇನ್ನುಳಿದಂತೆ ನಾಯಕ ಸೀಲಾರ್ 21 ರನ್ ಗಳಿಸಿದರು.

ಬಳಿಕ ಸುಲಭ ಗುರಿ ಬೆನ್ನತ್ತಿದ ಐರ್ಲೆಂಡ್, ಪಾಲ್ ಸ್ಟಿರ್ಲಿಂಗ್ (30*) ಹಾಗೂ ಗರೆತ್ ಡಿಲಾನಿ (44) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 15.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.