ADVERTISEMENT

ಭಾರತ ಎದುರು ಟಿ20 ಕ್ರಿಕೆಟ್ ಸರಣಿ: ಬಾಂಗ್ಲಾ ತಂಡದಲ್ಲಿ ತಮೀಮ್ ಇಲ್ಲ

ಗಾಯದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 13:43 IST
Last Updated 26 ಅಕ್ಟೋಬರ್ 2019, 13:43 IST
ತಮೀಮ್ ಇಕ್ಬಾಲ್ –ಎಎಫ್‌ಪಿ ಚಿತ್ರ
ತಮೀಮ್ ಇಕ್ಬಾಲ್ –ಎಎಫ್‌ಪಿ ಚಿತ್ರ   

ಢಾಕಾ: ಮುಂದಿನ ತಿಂಗಳಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಬಾಂಗ್ಲಾದೇಶ ಕ್ರಿಕೆಟ್‌ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್ ಇಕ್ಬಾಲ್ ಇರುವುದಿಲ್ಲ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಇಕ್ಬಾಲ್ ಅವರು ತುಂಬು ಗರ್ಭಿಣಿ ಪತ್ನಿಯೊಂದಿಗೆ ಇರಲು ಬಯಸಿದ್ದು ಪ್ರವಾಸದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಅವರ ಬದಲಿಗೆ ಎಡಗೈ ಬ್ಯಾಟ್ಸ್‌ಮನ್ ಇಮ್ರುಲ್ ಕೆಯ್ಸ್‌ಗೆ ಅವಕಾಶ ನೀಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. 3 ಟ್ವೆಂಟಿ–20 ಪಂದ್ಯಗಳಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ. ನವೆಂಬರ್ 3ರಂದು ದೆಹಲಿಯಲ್ಲಿ ಮೊದಲ ಪಂದ್ಯ ನಡೆಯಲಿದೆ.

‘ಪಕ್ಕೆಲುಬು ನೋವಿನಿಂದ ಬಳಲುತ್ತಿದ್ದರೂ ತಮೀಮ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಈಗ ಅವರೇ ದೂರ ಉಳಿಯಲು ಬಯಸಿದ್ದಾರೆ. ನವೆಂಬರ್‌ 14ರಿಂದ ನಡೆಯಲಿರುವ ಟೆಸ್ಟ್ ಸರಣಿಗೂ ಅವರು ಅಲಭ್ಯರಾಗುವ ಸಾಧ್ಯತೆ ಇದೆ’ ಎಂದು ಕ್ರಿಕ್ ಇನ್ಫೊ ವೆಬ್‌ಸೈಟ್ ವರದಿ ಮಾಡಿದೆ.

ADVERTISEMENT

‘ಕೋಲ್ಕತ್ತದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಸಂದರ್ಭದಲ್ಲಿ ಲಭ್ಯ ಇರುವುದಿಲ್ಲ ಎಂದು ತಮೀಮ್ ಈ ಹಿಂದೆ ತಿಳಿಸಿದ್ದರು. ಆದರೆ ಈಗ, ನವೆಂಬರ್ ಮೊದಲ ವಾರದಿಂದಲೇ ಪತ್ನಿಯ ಜೊತೆ ಇರಲು ಬಯಸಿರುವುದಾಗಿ ಹೇಳಿದ್ದಾರೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಮಿನ್ಹಾಜುಲ್ ಅಬೆದಿನ್ ತಿಳಿಸಿದರು.

ಎಡಗೈ ಬ್ಯಾಟ್ಸ್‌ಮನ್ ಆಗಿರುವ ತಮೀಮ್ ಇತ್ತೀಚಿನ ಪಂದ್ಯಗಳಲ್ಲಿ ಅಮೋಘ ಆಟ ಆಡಿದ್ದಾರೆ. ಆದರೆ ತವರಿನಲ್ಲಿ ಅಫ್ಗಾನಿಸ್ತಾನ ಎದುರು ನಡೆದ ಟೆಸ್ಟ್ ಪಂದ್ಯದಲ್ಲಿ ಮತ್ತು ಶ್ರೀಲಂಕಾ ವಿರುದ್ಧ ನಡೆದ ಟ್ವೆಂಟಿ–20 ಸರಣಿಯಿಂದ ದೂರ ಉಳಿದಿದ್ದರು.

ಟ್ವೆಂಟಿ–20 ಸರಣಿಗೆ ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ದಾಸ್‌, ಇಮ್ರುಲ್ ಕೆಯ್ಸ್‌, ಸೌಮ್ಯಾ ಸರ್ಕಾರ್, ಮೊಹಮ್ಮದ್ ನಯೀಮ್‌, ಮುಷ್ಫಿಕುರ್ ರಹೀಮ್, ಮಹಮ್ಮದುಲ್ಲ, ಅಫೀಜ್‌ ಹೊಸೇನ್‌, ಮೊಸಾಡೆಕ್ ಹೊಸೇನ್, ಅಮಿನುಲ್ ಇಸ್ಲಾಮ್‌, ಅರಾಫತ್ ಸನ್ನಿ, ಅಲ್ ಅಮೀನ್ ಹೊಸೇನ್‌, ಮುಸ್ತಫಿಜುರ್ ರಹಿಮಾನ್, ಶಫೀವುಲ್ ಇಸ್ಲಾಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.