ಲಂಡನ್: ತಾವು ಕೂಡ ಜನಾಂಗೀಯ ನಿಂದನೆಗೆ ಗುರಿಯಾಗಿರುವುದಾಗಿ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಹೇಳಿದ್ದಾರೆ.
38 ವರ್ಷದ ಟೇಲರ್ ಕಳೆದ ಏಪ್ರಿಲ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಗುರುವಾರ ಬಿಡುಗಡೆಯಾದ ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್ ಅ್ಯಂಡ್ ವೈಟ್’ ಕೃತಿಯಲ್ಲಿ ಟೇಲರ್ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
‘ನ್ಯೂಜಿಲೆಂಡ್ ತಂಡದ ಡ್ರೆಸಿಂಗ್ ರೂಮ್‌ನಲ್ಲಿ ಸಹ ಆಟಗಾರರಿಂದಲೇ ಜನಾಂಗೀಯ ನಿಂದನೆಗಳನ್ನು ಅನುಭವಿಸಿದ್ದೇನೆ. ಬೇರೆ ಬೇರೆ ರೀತಿಯ ನಿಂದನೆಗಳನ್ನು ಕೇಳುತ್ತಲೇ ಇದ್ದೆ. ವೆನಿಲಾದಲ್ಲಿ ಕಂದು ಮುಖ ಎಂದು ಅಣಕಿಸುತ್ತಿದ್ದರು. ನಾನು ಅರ್ಧ ಮಾತ್ರ ಒಳ್ಳೆಯ ವ್ಯಕ್ತಿ ಎಂದು ಒಬ್ಬ ಸಹ ಆಟಗಾರ ಹೇಳುತ್ತಿದ್ದ. ಇನ್ನೂ ಕೆಲವರು ನನ್ನ ಮೂಲಜನಾಂಗದ ಕುರಿತು ಅಣಕವಾಡಿದ್ದು ಇದೆ’ ಎಂದು ಟೇಲರ್ ಬರೆದಿದ್ದಾರೆ.
ಟೇಲರ್ 16 ವರ್ಷಗಳ ಕಾಲ ಕಿವೀಸ್ ತಂಡದಲ್ಲಿ ಆಡಿದ್ದರು. ಅವರು 112 ಟೆಸ್ಟ್‌ಗಳಿಂದ 7683 ರನ್‌ಗಳನ್ನು ಸೇರಿಸಿದ್ದರು. ಸುಮಾರು ಎರಡು ವರ್ಷ ತಂಡದ ನಾಯಕರೂ ಆಗಿದ್ದರು.
ಟೇಲರ್ ಆರೋಪಗಳ ತನಿಖೆಗೆ ನ್ಯೂಜಿಲೆಂಡ್ ಕ್ರಿಕೆಟ್ ಮುಂದಾಗಿದೆ.
‘ರಾಸ್ ಅವರನ್ನು ಈ ಕುರಿತು ಸಂಪರ್ಕಿಸಿದ್ದೇವೆ. ಅವರು ತಮ್ಮ ಪುಸ್ತಕದಲ್ಲಿ ಮಾಡಿರುವಅರೋಪಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳುತ್ತೇವೆ. ಈ ಕುರಿತು ಮಾತುಕತೆ ನಡೆಸುತ್ತಿದ್ದೇವೆ. ನಾವು ವರ್ಣಬೇಧವನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ’ ಎಂದು ನ್ಯೂಜಿಲೆಂಡ್ ಕ್ರಿಕೆಟ್ ವಕ್ತಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.