ಮುಂಬೈ: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿದ ಬಳಿಕ ಭಾರತ ಕ್ರಿಕೆಟ್ ತಂಡದ ಆಟಗಾರರು ಮುಂಬೈಗೆ ಬಂದಿಳಿದಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ವಿಜಯ ಘೋಷಣೆಯ ಮೂಲಕ ತಮ್ಮ ಮೆಚ್ಚಿನ ಆಟಗಾರರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸರಣಿಯ ಹೀರೊ ರಿಷಭ್ ಪಂತ್, ಮಾಜಿ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ ಜೊತೆ ಹೋಲಿಸಿರುವುದು ಉತ್ತಮ ಭಾವನೆ ತಂದಿದೆ. ಆದರೆ ತನ್ನದೇ ಆದ ಛಾಪು ಒತ್ತಲು ಬಯಸುವುದಾಗಿ ತಿಳಿಸಿದರು.
ಗಾಬಾ ಭದ್ರಕೋಟೆಯಲ್ಲಿ 32 ವರ್ಷಗಳಿಂದ ಸೋಲರಿಯದ ಸರದಾರನಾಗಿ ಮುನ್ನುಗ್ಗುತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಅಂತಿಮ ಟೆಸ್ಟ್‌ನಲ್ಲಿ ಮೂರು ವಿಕೆಟ್‌ಗಳಿಂದ ಮಣಿಸಿದ್ದ ಭಾರತ ತಂಡವು, ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.
1988ನೇ ಇಸವಿಯ ನವೆಂಬರ್‌ನಲ್ಲಿ ಕೊನೆಯದಾಗಿ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ವಿವ್ ರಿಚರ್ಡ್ಸ್ ನೇತೃತ್ವದ ವೆಸ್ಟ್‌ಇಂಡೀಸ್ ತಂಡವು ಅಲನ್ ಬಾರ್ಡರ್ ನಾಯಕತ್ವದ ಆಸೀಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತ್ತು.
ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಿಷಭ್ ಪಂತ್ ಅಜೇಯ 89 ರನ್ ಗಳಿಸಿದ್ದರು. ಈ ಮೂಲಕ ಅಂತಿಮ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ದಾಖಲೆಯ 328 ರನ್‌ಗಳನ್ನು ಬೆನ್ನಟ್ಟಿತ್ತು.
ಇದು ಕ್ರಿಕೆಟ್ ಇತಿಹಾಸದಲ್ಲೇ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಎಂದು ಬಿಂಬಿಸಲಾಗಿದೆ. ಅಲ್ಲದೆ ಭಾರತೀಯ ತಂಡದ ಅಮೋಘ ಪ್ರದರ್ಶನಕ್ಕಾಗಿ ಬಿಸಿಸಿಐ ಐದು ಕೋಟಿ ರೂ.ಗಳ ಬೋನಸ್ ಘೋಷಿಸಿತ್ತು.
ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಂಡಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಇಡೀ ತಂಡವು ತುಂಬಾ ಸಂತಸದಲ್ಲಿದೆ ಎಂದು ರಿಷಭ್ ಪಂತ್ ಪ್ರತಿಕ್ರಿಯಿಸಿದರು.
ಎಂ.ಎಸ್. ಧೋನಿ ಜೊತೆ ಹೋಲಿಸಿದಾಗ ಉತ್ತಮ ಭಾವನೆ ಮೂಡುತ್ತದೆ. ಆದರೆ ನಾನು ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ. ಭಾರತ ಕ್ರಿಕೆಟ್ ತಂಡದಲ್ಲಿ ನನ್ನದೇ ಆದ ಹೆಸರು ಮಾಡಲು ಬಯಸುತ್ತೇನೆ. ಅದರತ್ತ ಮಾತ್ರ ಗಮನ ಕೇಂದ್ರಿಕರಿಸಿದ್ದೇನೆ. ಅಲ್ಲದೆ ಯುವ ಆಟಗಾರನನ್ನು ಮಹಾನ್ ಆಟಗಾರರೊಂದಿಗೆ ಹೋಲಿಕೆ ಮಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.