ADVERTISEMENT

ಟೆಸ್ಟ್​ ನಾಯಕತ್ವಕ್ಕೆ ಕೊಹ್ಲಿ ವಿದಾಯ: ಸಚಿನ್, ಯುವಿ, ಮಯಂಕ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2022, 11:14 IST
Last Updated 16 ಜನವರಿ 2022, 11:14 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕತ್ವ ಸ್ಥಾನಕ್ಕೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ ಅವರ ಮುಂದಾಳತ್ವದ ಬಗ್ಗೆ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಯುವರಾಜ್‌ ಸಿಂಗ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವಸಚಿನ್ ತೆಂಡೂಲ್ಕರ್ ಅವರು, ‘ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ನೀವು (ಕೊಹ್ಲಿ) ತಂಡಕ್ಕಾಗಿ ಯಾವಾಗಲೂ ಶೇ 100 ರಷ್ಟು ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದೀರಿ. ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.

‘ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಕಿಂಗ್ ಕೊಹ್ಲಿ ಅವರದ್ದು ಗಮನಾರ್ಹ ಪ್ರಯಾಣವಾಗಿದೆ. ಕೆಲವೇ ಕೆಲವರು ಸಾಧಿಸಿದ್ದನ್ನು ಸಾಧಿಸಲು ಸಮರ್ಥರಾಗಿದ್ದಾರೆ. ನೀವು (ಕೊಹ್ಲಿ) ಪ್ರತಿ ಬಾರಿ ನಿಜವಾದ ಚಾಂಪಿಯನ್‌ ರೀತಿ ಆಡಿದ್ದೀರಿ. ಭವಿಷ್ಯದಲ್ಲಿ ನಿಮಗೆ ಮತ್ತಷ್ಟು ಯಶಸ್ಸು ಲಭಿಸಲಿ’ ಎಂದು ಯುವರಾಜ್‌ ಸಿಂಗ್ ಟ್ವೀಟ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ವಿರಾಟ್‌ ಕೊಹ್ಲಿ ಜತೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಟೀಮ್ ಇಂಡಿಯಾದ ಬ್ಯಾಟರ್ ಮಯಂಕ್ ಅಗರ್‌ವಾಲ್, ‘ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ನಿಮಗೆ ಅಭಿನಂದನೆ. ತಂಡದಲ್ಲಿ ನಿಮ್ಮ ನಾಯಕತ್ವದಡಿ ಆಡಿರುವುದಕ್ಕೆ ಸಂತಸವಾಗಿದೆ. ಆಟದ ಬಗೆಗಿನ ನಿಮ್ಮ ಉತ್ಸಾಹ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು ಕ್ಯಾಷ್ಟನ್’ ಎಂದು ಬರೆದಿದ್ದಾರೆ.

ADVERTISEMENT

ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸುವ ಸುವರ್ಣಾವಕಾಶವನ್ನು ಕಳೆದುಕೊಂಡ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ವಿರಾಟ್‌ ಕೊಹ್ಲಿ ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. 40 ಪಂದ್ಯಗಳಲ್ಲಿ ಭಾರತ ತಂಡವು ಗೆಲುವು ಸಾಧಿಸಿತ್ತು. 17 ಟೆಸ್ಟ್‌ಗಳಲ್ಲಿ ಪರಾಭವಗೊಂಡಿದ್ದು, 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದವು.

33 ವರ್ಷದ ವಿರಾಟ್‌ ಕೊಹ್ಲಿ ಎರಡು ತಿಂಗಳ ಹಿಂದೆ ಟಿ–20 ಹಾಗೂ ಏಕದಿನ ಕ್ರಿಕೆಟ್‌ನ ನಾಯಕತ್ವವನ್ನು ತ್ಯಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.