ADVERTISEMENT

ಕರುಣ್ ನಾಯರ್‌ಗೆ ‘ಇನ್ನೊಂದು ಅವಕಾಶ’ ಕೊಟ್ಟ ಕ್ರಿಕೆಟ್!

ಗಿರೀಶ ದೊಡ್ಡಮನಿ
Published 25 ಮೇ 2025, 0:50 IST
Last Updated 25 ಮೇ 2025, 0:50 IST
ಕರುಣ್ ನಾಯರ್
ಕರುಣ್ ನಾಯರ್   

ಬೆಂಗಳೂರು: ಕರ್ನಾಟಕದ ಕರುಣ್ ನಾಯರ್ ಅವರು ಎಂಟು ವರ್ಷಗಳ ನಂತರ ಭಾರತ ಟೆಸ್ಟ್ ಕ್ರಿಕೆಟ್‌ ತಂಡಕ್ಕೆ ಮರುಪ್ರವೇಶ ಮಾಡುತ್ತಿದ್ದಾರೆ. ಟೆಸ್ಟ್ ಮಾದರಿಯಲ್ಲಿ ತ್ರಿಶತಕ ದಾಖಲಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಯ ಕರುಣ್ ಅಪ್ಪಟ ಛಲದಂಕಮಲ್ಲ. 

ವೈಫಲ್ಯದ ಪ್ರಪಾತಕ್ಕಿಳಿದರೂ ಗಟ್ಟಿ ಛಲ ಮತ್ತು ಕಠಿಣ ಪರಿಶ್ರಮದಿಂದ ಪುಟಿದೆದ್ದು ನಿಂತವರು ಕರುಣ್. 2016ರಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೆಂಗಳೂರಿನ ಕರುಣ್ ಪದಾರ್ಪಣೆ ಮಾಡಿದ್ದರು. ಆಡಿದ ಮೂರನೇ ಟೆಸ್ಟ್‌ನಲ್ಲಿಯೇ (ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ) ತ್ರಿಶತಕ (ಅಜೇಯ 303) ಹೊಡೆದರು.  ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಸಾಧನೆ ಮಾಡಿದ ಭಾರತೀಯ ಆಟಗಾರನಾದರು.  ಆದರೆ ಅದರ ನಂತರ ಅವರಿಗೆ ಸಿಕ್ಕಿದ್ದು ಕೇವಲ ಮೂರು ಟೆಸ್ಟ್ ಪಂದ್ಯಗಳು ಮಾತ್ರ. ಅದೇಕೋ ಆಯ್ಕೆಗಾರರು ಅವರಿಗೆ ಇದಕ್ಕಿಂತ ಹೆಚ್ಚು ಅವಕಾಶಗಳನ್ನು ಕೊಡುವ ಔದಾರ್ಯ ತೋರಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಅವರು ಕ್ರಮೇಣಗಿ ವೈಫಲ್ಯಗಳ ಸುಳಿಗೆ ಸಿಲುಕಿದರು. 2022ರ ಸುಮಾರಿಗೆ ತವರಿನ ತಂಡದಲ್ಲಿಯೂ ಸ್ಥಾನ ಕೈತಪ್ಪಿತು.

ಆಗ ಅವರು ಹಾಕಿದ್ದ  ‘ಪ್ರಿಯ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು’ ಎಂಬ ಎಕ್ಸ್‌ ಸಂದೇಶ ಕ್ರಿಕೆಟ್‌ ಅಭಿಮಾನಿಗಳ ಮನಕಲಕಿದ್ದು ಸುಳ್ಳಲ್ಲ. 

ADVERTISEMENT

ಅವರಿಗೆ ಮತ್ತೆ ಅವಕಾಶಗಳು ಲಭಿಸಿದವು. ವಿದರ್ಭ ತಂಡಕ್ಕೆ ವಲಸೆ ಹೋದ ಅವರು ತಮ್ಮ ಪ್ರತಿಭೆಯನ್ನು ಪಣಕ್ಕೊಡ್ಡಿದರು. ಕಳೆದ ದೇಶಿ ಋತುವಿನಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದರು. ಐಪಿಎಲ್‌ನಲ್ಲಿಯೂ ಮಿಂಚಿದರು. ಅವರ ಛಲದ ಆಟದ ಮುಂದೆ ಬಿಸಿಸಿಐ ಆಯ್ಕೆ ಸಮಿತಿ ತಲೆದೂಗಲೇಬೇಕಾಯಿತು. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ಎ ತಂಡಕ್ಕೆ ಈಚೆಗಷ್ಟೇ ಆಯ್ಕೆ ಮಾಡಲಾಯಿತು. ಇದೀಗ ನವನಾಯಕ ಶುಭಮನ್ ಗಿಲ್ ನಾಯಕತ್ವದ ತಂಡದಲ್ಲಿ ಕರುಣ್ ಸ್ಥಾನ ಪಡೆದಿದ್ದಾರೆ. 33 ವರ್ಷದ ಕರುಣ್ ಇಂಗ್ಲೆಂಡ್ ಅಂಗಳದಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಮೆರೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. 

ಒಂದೊಮ್ಮೆ ಶುಭಮನ್ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರೆ ಕರುಣ್ ಅಥವಾ ಕೆ.ಎಲ್. ರಾಹುಲ್ ಅವರು ಯಶಸ್ವಿ ಜೈಸ್ವಾಲ್ ಜೊತೆಗೆ ಇನಿಂಗ್ಸ್ ಆರಂಭಿಸಬಹುದು. ಇಲ್ಲದಿದ್ದರೆ ವಿರಾಟ್ ಕೊಹ್ಲಿ ನಿವೃತ್ತಿಯಿಂದ ತೆರವಾಗಿರುವ ನಾಲ್ಕನೇ ಕ್ರಮಾಂಕದಲ್ಲಿಯೂ ಕರುಣ್ ಆಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಸದ್ಯ ಕರುಣ್ ಸೇರಿದಂತೆ ಟೆಸ್ಟ್ ತಂಡದಲ್ಲಿ ಮೂವರು ಕನ್ನಡಿಗರು ಇದ್ದಾರೆ. ರಾಹುಲ್ ಮತ್ತು ವೇಗಿ ಪ್ರಸಿದ್ಧಕೃಷ್ಣ ಅವರು ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.