
ರಾಂಚಿ: ಟೆಸ್ಟ್ ಸರಣಿಯಲ್ಲಾದ ಮುಖಭಂಗದಿಂದ ಭಾರತ ತಂಡವು ಸಾವರಿಸಿಕೊಳ್ಳುವ ಮೊದಲೇ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಶುರುವಾಗುತ್ತಿದೆ. ‘ಆತ್ಮವಿಶ್ವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ತಕ್ಕ ಉತ್ತರ ನೀಡಬೇಕಾದರೆ ಭಾರತ ತಂಡವು ಏಕದಿನ ಕ್ರಿಕೆಟ್‌ಗೆ ವೇಗವಾಗಿ ಹೊಂದಿಕೊಳ್ಳಬೇಕಾಗುತ್ತದೆ’ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.
ಕೋಲ್ಕತ್ತ ಮತ್ತು ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ಕೈಲಿ ‘ವೈಟ್ ವಾಷ್’ ಅನುಭವಿಸಿದ ಬೆನ್ನಲ್ಲೇ, ಭಾರತ ತಂಡಕ್ಕೆ ಮೂರು ಪಂದ್ಯಗಳ ಏಕದಿನ ಸರಣಿ ಎದುರಾಗಿದೆ. ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ಭಾನುವಾರ (ನ. 30ರಂದು) ನಡೆಯಲಿದೆ.
ಟೆಸ್ಟ್‌ನಿಂದ ಏಕದಿನ ಮಾದರಿಗೆ ತಕ್ಷಣಕ್ಕೆ ಹೊಂದಿಕೊಳ್ಳಲು ಗಟ್ಟಿ ಮನೋಬಲ ಬೇಕಾಗುತ್ತದೆ. ಆದರೆ ತಂಡವು ಈ ರೂಪಾಂತರಕ್ಕೆ ದೃಢಸಂಕಲ್ಪ ಹೊಂದಿದೆ ಎಂದು ಅವರು ಹೇಳಿದರು. ಇಲ್ಲಿನ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾರತ ತಂಡದ ಮೊದಲ ನೆಟ್ ಪ್ರಾಕ್ಟೀಸ್‌ಗೆ ಮೊದಲು ಮಾಧ್ಯಮಗೋಷ್ಠಿಯಲ್ಲಿ ಮಾರ್ಕೆಲ್ ಮಾತನಾಡಿದರು.
‘ಎರಡು ವಾರಗಳು ನಮ್ಮ ಪಾಲಿಗೆ ನಿರಾಶಾದಾಯಕವಾಗಿದ್ದವು. ಆದರೆ ತಂಡದ ಆತ್ಮಾವಲೋಕನಕ್ಕೆ ಕೆಲದಿನಗಳ ಅವಧಿ ದೊರೆಯಿತು’ ಎಂದು ಹೇಳಿದರು.
ಉತ್ತಮ ಆರಂಭ ಅಗತ್ಯ:
ಟೆಸ್ಟ್ ಸರಣಿಯ ಗೆಲುವಿನಿಂದ ಉಲ್ಲಸಿತವಾಗಿರುವ ದಕ್ಷಿಣ ಆಫ್ರಿಕಾ ವಿಶ್ವಾಸದಲ್ಲಿದೆ. ಇಂಥ ತಂಡ ಅಪಾಯಕಾರಿಯಾಗೇ ಕಾಣುತ್ತದೆ. ಹಿಂದಿನದನ್ನೆಲ್ಲಾ ಮರೆತು ಮುಂದಿನ ವಾರ ಉತ್ತಮ ಆರಂಭ ಪಡೆಯುವುದು ನಮ್ಮ ತಂಡದ ಪಾಲಿಗೆ ಮುಖ್ಯವಾಗಲಿದೆ’ ಎಂದು ಮಾರ್ಕೆಲ್ ಅಭಿಪ್ರಾಯಪಟ್ಟರು.
ಆಡುವ 11ರಲ್ಲಿ ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ಇಬ್ಬರೂ ಇರುತ್ತಾರೆಯೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಆ ವಿಷಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು. ‘ನನ್ನದು ಬೌಲಿಂಗ್ ವಿಭಾಗ. ತಂಡದ ಆಯ್ಕೆಯಲ್ಲಿ ನಾನು ಒಳಗೊಳ್ಳುವುದಿಲ್ಲ. ಇದನ್ನು ಆಯ್ಕೆಗಾರರು ಮತ್ತು ನಾಯಕ ನೋಡಿಕೊಳ್ಳುತ್ತಾರೆ’ ಎಂದರು.
ಚೇತರಿಕೆಯತ್ತ ಗಿಲ್:
ಗಾಯಾಳಾಗಿದ್ದ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ‘ಎರಡು ದಿನಗಳ ಹಿಂದೆ ಶುಭಮನ್ ಜೊತೆ ಮಾತನಾಡಿದ್ದೆ. ಅವರ ಚೇತರಿಕೆ ಉತ್ತಮವಾಗಿದೆ’ ಎಂದರು.
ಶ್ರೇಯಸ್ ಅಯ್ಯರ್ ಕೂಡ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇಬ್ಬರನ್ನೂ ಮರಳಿ ಸ್ವಾಗತಿಸಲು ಕಾಯುತ್ತಿದ್ದೇವೆ. ಅವರು ಆರೋಗ್ಯವಾಗಿದ್ದು, ಪುನರಾಗಮನಕ್ಕೆ ಸಿದ್ಧತೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.
ಉತ್ತಮ ಅವಕಾಶ:
ತಂಡದಲ್ಲಿ ಸೀನಿಯರ್ ಬೌಲರ್‌ಗಳಿಗೆ ವಿಶ್ರಾಂತಿ ನೀಡಿರುವುದರಿಂದ, ಅವಕಾಶದ ನಿರೀಕ್ಷೆಯಲ್ಲಿರುವ ಎರಡನೇ ಹಂತದ ಬೌಲರ್‌ಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಏಕದಿನ ಸರಣಿಯು ಅವಕಾಶ ಒದಗಿಸಿದೆ ಎಂದು ಅವರು ಹೇಳಿದರು.
‘ಅರ್ಷದೀಪ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ಅವರಿಗೆ ಇದು ಸುವರ್ಣ ಅವಕಾಶ. ಅವರು ಗುಣಮಟ್ಟದ ಬ್ಯಾಟಿಂಗ್ ಸರದಿಯ ಎದುರು ಬೌಲಿಂಗ್ ಮಾಡಬೇಕಾಗಿದೆ. ಅವರ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಪರೀಕ್ಷೆಯಾಗಲಿದೆ’ ಎಂದು ಮಾರ್ಕೆಲ್ ಹೇಳಿದರು.
2027ರ ಏಕದಿನ ವಿಶ್ವಕಪ್‌ನಲ್ಲಿ ಹಿರಿಯ ಆಟಗಾರರಾದ ಕೊಹ್ಲಿ ಮತ್ತು ರೋಹಿತ್ ಆಡುವ ಸಂಭವದ ಬಗ್ಗೆ ಕೇಳಿದಾಗ, ‘ಅನುಭವ ಎಂದಿಗೂ ಅಮೂಲ್ಯವಾದುದು. ನನಗೆ ಅನುಭವದ ಮೇಲೆ ನಂಬಿಕೆಯಿದೆ. ಇದಕ್ಕೆ ಪರ್ಯಾಯವಿಲ್ಲ. ಈ ಆಟಗಾರರು ನಮಗೆ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ದೊಡ್ಡ ಟೂರ್ನಿಗಳಲ್ಲಿ ಹೇಗೆ ಆಡಬೇಕೆಂಬುದು ಅವರಿಗೆ ತಿಳಿಸಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆಡಲು ಸಿದ್ಧರಿದ್ದೇವೆ ಎಂದು ಅನಿಸಿದರೆ, ಅವರು ಆಡಬಹುದು’ ಎಂದರು.
ರಾಂಚಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದಕ್ಕೆ ಮುನ್ನ ಶುಕ್ರವಾರ ಭಾರತ ತಂಡ ತಾಲೀಮು ವೇಳೆ ಜಾಗಿಂಗ್ ನಡೆಸಿದ ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.