ADVERTISEMENT

ಕಲ್ಲುಗಣಿಯಲ್ಲಿ ಕ್ರಿಕೆಟ್ ತೋಟ ಅರಳಿಸಿದ ಕಸ್ತೂರಿ ರಂಗನ್

ಗಿರೀಶದೊಡ್ಡಮನಿ
Published 19 ಆಗಸ್ಟ್ 2020, 19:30 IST
Last Updated 19 ಆಗಸ್ಟ್ 2020, 19:30 IST
ಮಗ ಶ್ರೀರಾಮ್ ಜೊತೆಗೆ ಕಸ್ತೂರಿ ರಂಗನ್(ಎಡಚಿತ್ರ)
ಮಗ ಶ್ರೀರಾಮ್ ಜೊತೆಗೆ ಕಸ್ತೂರಿ ರಂಗನ್(ಎಡಚಿತ್ರ)   

‘ಅವತ್ತು ಚಿನ್ನಸ್ವಾಮಿಯವರು ನನ್ನನ್ನು ಕರೆದು ಇಲ್ಲೊಂದು ಕ್ರಿಕೆಟ್ ಮೈದಾನ ಆಗಬೇಕು. ನಿಮ್ಮದೇ ಜವಾಬ್ದಾರಿ ಎಂದಿದ್ದರು. ಅವರು ತೋರಿಸಿದ್ದ ಜಾಗ ಕಲ್ಲುಗಣಿಯಾಗಿತ್ತು ಬಂಡೆಕಲ್ಲುಗಳು ಮೈಚಾಚಿಕೊಂಡಿದ್ದವು. ಆದರೂ ಒಪ್ಪಿದೆ. ಕೆಲವೇ ತಿಂಗಳುಗಳಲ್ಲಿ ಕ್ರಿಕೆಟ್ ಮೈದಾನ ಅರಳಿತು. ಅದೇ ಚಿನ್ನಸ್ವಾಮಿ ಕ್ರೀಡಾಂಗಣ‘–

ಈ ಮಾತುಗಳನ್ನು ಹೇಳುವಾಗ ಗೋಪಾಲಸ್ವಾಮಿ ಅಯ್ಯಂಗಾರ ಕಸ್ತೂರಿರಂಗನ್ ಅವರ ಕಂಗಳಲ್ಲಿ ಚಿನ್ನದಂತಹ ಹೊಳಪು ಹರಿಯುತ್ತಿತ್ತು. ಮುಖದಲ್ಲಿ ನವೋಲ್ಲಾಸದ ಚೈತನ್ಯ ಉಕ್ಕುತ್ತಿತ್ತು. ಕ್ರಿಕೆಟ್‌ ಕ್ಷೇತ್ರಕ್ಕೆ ಮತ್ತು ಕರ್ನಾಟಕಕ್ಕೆ ಮಹತ್ವದ ಕಾಣಿಕೆ ಕೊಟ್ಟ ಸಾರ್ಥಕ ಭಾವ ಅವರ ನಡೆನುಡಿಯಲ್ಲಿ ಎದ್ದು ಕಾಣುತ್ತಿತ್ತು. ಅವರು 1948 ರಿಂದ 1963ರವರೆಗೆ ಮೈಸೂರು ತಂಡದಲ್ಲಿ ಮಾಡಿದ ಸಾಧನೆಗಳೂ ಸ್ಮರಣಾರ್ಹ. ಆದರೆ ಅದಕ್ಕಿಂತಲೂ ಅವರು ಪಿಚ್ ಕ್ಯುರೇಟರ್ ಆಗಿ ನೀಡಿದ ಕಾಣಿಕೆ ಮಹತ್ತರವಾದದ್ದು.

1969ರಲ್ಲಿ ಚಿನ್ನಸ್ವಾಮಿಯವರ ಅಣತಿಯಂತೆ ಸುಂದರ ಮೈದಾನ ಅರಳಿಸಿದ್ದು ಕಸ್ತೂರಿರಂಗನ್ ಅವರ ಅಪ್ಪಟ ಕಸುಬುಗಾರಿಕೆ ಮತ್ತು ಕ್ರಿಕೆಟ್‌ ಪ್ರೀತಿಗೆ ನಿದರ್ಶನ. ತೋಟಗಾರಿಕೆಯು ವೃತ್ತಿಯಾಗಿದ್ದ ಮನೆತನದವರು ಕಸ್ತೂರಿರಂಗನ್. ಬೆಂಗಳೂರು ಹೊರವಲಯದ ದೊಡ್ಡಾಲದ ಮರದ ಸಮೀಪ ಅವರ ಚೆಂದದ ಗುಲಾಬಿ ತೋಟವಿದೆ. ಹತ್ತಾರು ದೇಶಗಳಿಗೆ ವಿಧವಿಧ ತಳಿಗಳ ಗುಲಾಬಿ ಹೂವುಗಳ ರಫ್ತುದಾರರೂ ಹೌದು. ಇದರಿಂದಾಗಿ ಮಣ್ಣಿನ ಗುಣವನ್ನು ಚೆನ್ನಾಗಿ ಅರಿತಿದ್ದರು ಅವರು. ಆದ್ದರಿಂದಲೇ ಬಂಡೆಕಲ್ಲುಗಳನ್ನು ಕರಗಿಸಿ ಅಂತರರಾಷ್ಟ್ರೀಯ ಕ್ರೀಡಾಂಗಣ ಅರಳಿಸಿದರು. 2001ರವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸಿದರು.

ADVERTISEMENT

1930ರ ಅಕ್ಟೋಬರ್ 12ರಂದು ಜನಿಸಿದ ಕಸ್ತೂರಿರಂಗನ್, ಶಾಲಾ ದಿನಗಳಲ್ಲಿಯೇ ಕ್ರಿಕೆಟ್‌ನತ್ತ ಆಕರ್ಷಿತರಾದವರು. ಬಲಗೈ ಮಧ್ಯಮವೇಗದ ಬೌಲರ್ ಆಗಿ ಗಮನ ಸೆಳೆದರು. ಆಗಿನ ಮೈಸೂರು ತಂಡದಲ್ಲಿ ಸ್ಥಾನ ಪಡೆದುಕೊಂಡರು.

’ಕರ್ನಾಟದ ವೇಗಿಗಳ ಸಾಲಿನಲ್ಲಿ ಬರುವ ಮೊದಲ ಹೆಸರು ಕಸ್ತೂರಿರಂಗನ್ ಅವರದ್ದು. ಉತ್ತಮ ಲಯ, ವೇಗ ಮತ್ತು ತಿರುವುಗಳ ಸಮೀಕರಣ ಅವರ ಎಸೆತಗಳಲ್ಲಿರುತ್ತಿತ್ತು‘ ಎಂದು ನೆನಪಿಸಿಕೊಳ್ಳುತ್ತಾರೆ ಅವರ ಆಪ್ತ ಒಡನಾಡಿ ಮತ್ತು ಕ್ರಿಕೆಟ್ ಅಂಕಿ ಸಂಖ್ಯೆ ತಜ್ಞ ಎಚ್‌.ಆರ್. ಗೋಪಾಲಕೃಷ್ಣ.

1951–52ರಲ್ಲಿ ಅವರು ಗಳಿಸಿದ 12 ವಿಕೆಟ್‌ಗಳು ಭಾರತ ತಂಡದ ಕದ ತೆರೆಯಲು ಕಾರಣವಾದವು. ಆದರೆ, ಅವರು ವೈಯಕ್ತಿಕ ಕಾರಣಗಳಿಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗಲು ಕಸ್ತೂರಿ ರಂಗನ್ ನಿರಾಕರಿಸಿದರು. ನಂತರ ಮೈಸೂರು ತಂಡದ ನಾಯಕರಾಗಿಯೂ ಅವರು ಆಡಿದರು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಪಿಚ್‌ ಕಮಿಟಿಯ ಮುಖ್ಯಸ್ಥರಾಗಿದ್ದರು. ಆ ಸಂದರ್ಭದಲ್ಲಿ ಅವರಿಂದ ತರಬೇತಿ ಪಡೆದವರು ಇವತ್ತು ದೇಶದ ಹಲವು ನಗರಗಳ ಕ್ರೀಡಾಂಗಣಗಳಲ್ಲಿ ಕ್ಯುರೇಟರ್‌ ಆಗಿದ್ದಾರೆ.

2010ರಿಂದ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್ ಕ್ಯುರೇಟರ್ ಆಗಿರುವ ಶ್ರೀರಾಮ್ ಅವರು ಕಸ್ತೂರಿರಂಗನ್ ಅವರ ಮಗ.

’ನಾನು ಪ್ರತಿಯೊಂದು ಪಂದ್ಯದಲ್ಲಿ ಪಿಚ್ ಸಿದ್ಧಮಾಡುವಾಗ ಅಪ್ಪನ ಸಲಹೆಗಳನ್ನು ಕೇಳುತ್ತಿದ್ದೆ. ಅದರಿಂದಾಗಿ ಉತ್ತಮ ಪಿಚ್‌ಗಳನ್ನು ನೀಡಲು ಸಾಧ್ಯವಾಗಿದೆ. ಅವರ ಅನುಭವ ಮತ್ತು ಕ್ರಿಕೆಟ್‌ ಪ್ರೀತಿ ಬಹಳ ದೊಡ್ಡದು. ನಮಗೆಲ್ಲ ದಾರಿದೀಪ‘ ಎಂದು ಶ್ರೀರಾಮ್ ಹೇಳುತ್ತಾರೆ.

89ರ ಇಳಿವಯಸ್ಸಿನಲ್ಲಿಯೂ ಶಿಸ್ತಿನ ಸಿಪಾಯಿಯಂತೆ ಇದ್ದವರು ಕಸ್ತೂರಿರಂಗನ್. ಚಾಮರಾಜಪೇಟೆಯ ವಿಶಾಲವಾಗಿ ಮೈಚಾಚಿರುವ ಅವರ ಮನೆಯಲ್ಲಿ ಈಗ ಅವರ ನೆನಪುಗಳು ಮಾತ್ರ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.