ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು
ಪಿಟಿಐ ಚಿತ್ರ
ದುಬೈ: ಭಾನುವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಪಂದ್ಯದ ಕುರಿತಂತೆ ಪ್ರತಿಕ್ರಿಯಿಸಿರುವ ಪಾಕ್‌ನ ವೇಗದ ಬೌಲರ್ ಹ್ಯಾರಿಸ್ ರೌಫ್, ತಮ್ಮ ತಂಡವು ಯಾವುದೇ ಒತ್ತಡದಲ್ಲಿಲ್ಲ. ಇತರೆ ತಂಡಗಳ ವಿರುದ್ಧದ ಪಂದ್ಯದಂತೆಯೇ ಭಾರತ ವಿರುದ್ಧದ ಪಂದ್ಯವನ್ನೂ ನೋಡುತ್ತಿರುವುದಾಗಿ ಹೇಳಿದ್ದಾರೆ.
ಭಾರತ ವಿರುದ್ಧದ ಪಂದ್ಯಕ್ಕೆ ಯಾವುದೇ ಒತ್ತಡವಿಲ್ಲ, ಎಲ್ಲ ಆಟಗಾರರು ನಿರಾಳರಾಗಿದ್ದಾರೆ ಮತ್ತು ಇತರ ಪಂದ್ಯಗಳಂತೆ ನಾವು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ರೌಫ್ ಹೇಳಿದ್ದಾರೆ.
ಶೇಕಡ100ಷ್ಟು ಫಿಟ್ ಆಗಿದ್ದೇನೆ ಎಂದು ರೌಫ್ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು 10 ಓವರ್ ಕೋಟಾ ಮುಗಿಸಿದ್ದರು.
‘ನಾವು ದುಬೈನಲ್ಲಿ ಈ ಮೊದಲು ಭಾರತವನ್ನು ಎರಡು ಬಾರಿ ಸೋಲಿಸಿದ್ದೇವೆ. ಆದ್ದರಿಂದ ನಮಗೆ ಇಲ್ಲಿನ ಪರಿಸ್ಥಿತಿಗಳು ಚೆನ್ನಾಗಿ ತಿಳಿದಿದೆ. ನಮ್ಮ ಸಂಪೂರ್ಣ ಆಟದ ಯೋಜನೆಯು ಪಂದ್ಯದ ದಿನದ ಪರಿಸ್ಥಿತಿಗಳು ಮತ್ತು ಪಿಚ್ ಅನ್ನು ಅವಲಂಬಿಸಿರುತ್ತದೆ’ಎಂದು ಅವರು ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮುಗಿದ ಅಧ್ಯಾಯವಾಗಿದ್ದು, ಆಟಗಾರರು ಈಗ ಭಾರತ ವಿರುದ್ಧದ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘ಸೈಮ್ ಅಯೂಬ್ ಅಲಭ್ಯತೆ ಮತ್ತು ಈಗ ಫಖರ್ ಜಮಾನ್ ಹೊರಗಿಳಿದಿರುವುದು ದೊಡ್ಡ ಹಿನ್ನಡೆಯಾಗಿದೆ. ಆದರೆ, ನಮ್ಮ ತಂಡದಲ್ಲಿ ಈಗಲೂ ಉತ್ತಮ ಪ್ರದರ್ಶನ ನೀಡುವ ಆಟಗಾರರಿದ್ದು, ಸರಣಿಯಲ್ಲಿ ಮೇಲುಗೈ ಸಾಧಿಸಲಿದ್ದೇವೆ’ಎಂದಿದ್ದಾರೆ.
ಭಾರತ ವಿರುದ್ಧ ಪಂದ್ಯವು ಹೀರೊ ಆಗಲು ದೊಡ್ಡ ಅವಕಾಶ ಎಂಬುದು ಎಲ್ಲ ಆಟಗಾರರಿಗೂ ತಿಳಿದಿದೆ. ಗಮನ ಕೇಂದ್ರೀಕರಿಸಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಅದು ಸಾಧ್ಯ ಎಂದು ರೌಫ್ ಹೇಳಿದ್ದಾರೆ.
ಕರಾಚಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿರುವ ಪಾಕಿಸ್ತಾನ, ಎಂಟು ತಂಡಗಳ ಟೂರ್ನಿಯ ನಾಕೌಟ್‌ನಲ್ಲಿ ಸ್ಥಾನ ಪಡೆಯಲು ಭಾರತವನ್ನು ಸೋಲಿಸಬೇಕಾಗಿದೆ.
ಶುಭಮನ್ ಗಿಲ್ ಅವರ ಅಜೇಯ ಶತಕದ ನೆರವಿನಿಂದ ಬಾಂಗ್ಲಾದೇಶ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿರುವ ಭಾರತ ತಂಡವು ಹೆಚ್ಚಿನ ಒತ್ತಡವಿಲ್ಲದೆ ಮೈದಾನಕ್ಕೆ ಇಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.