ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್‌ಗಳಾದ ರಾಬಿನ್ ಉತ್ತಪ್ಪ ಹಾಗೂ ರಿಯಾನ್ ಪರಾಗ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಬೇಸರವ್ಯಕ್ತಪಡಿಸಿದ್ದಾರೆ.
ಉತ್ಪಪ್ಪ ಅವರ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿರುವ ಗಂಭೀರ್, ರಾಜಸ್ಥಾನ ತಂಡದ ಪರ ಫಿನಿಷರ್ ಪಾತ್ರ ನಿಭಾಯಿಸಬೇಕು ಎಂಬ ನಿರೀಕ್ಷೆ ಉತ್ತಪ್ಪ ಅವರ ಮೇಲಿದೆ. ಆದರೆ, ಅವರು ಮಧ್ಯಮ ಕ್ರಮಾಂಕದಲ್ಲಿಯೂ ವಿಫಲರಾಗುತ್ತಿದ್ದಾರೆ. ಇದೇವೇಳೆ ಇತರ ಆಟಗಾರರು ಅವಕಾಶಕ್ಕಾಗಿ ಎದುರುನೋಡುತ್ತಿದ್ದಾರೆ. ಮಾತ್ರವಲ್ಲದೆ ಬೆನ್ ಸ್ಟೋಕ್ಸ್ ತಂಡ ಕೂಡಿಕೊಂಡರೆ ತಂಡದ ಆಡುವ ಹನ್ನೊಂದರ ಬಳಗದ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಆಡುವಬಳಗದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕ್ರೀಡಾವಾಹಿನಿ ಕ್ರಿಕ್‌ಇನ್ಫೋ ಜೊತೆ ಮಾತನಾಡಿರುವ ಗಂಭೀರ್,‘ರಾಬಿನ್ ಉತ್ತಪ್ಪ ಮತ್ತು ರಿಯಾನ್ ಪರಾಗ್ ಇಬ್ಬರಿಗೂ ಸಮಯ ಕೈಮೀರಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಉತ್ತಪ್ಪ ಯಾವ ವಿಭಾಗದಲ್ಲಿಯೂ ಗಮನಾರ್ಹ ಆಟವಾಡಿಲ್ಲ. ಇದೀಗ ಅವರು ಉತ್ತಮ ಪ್ರದರ್ಶನ ನೀಡಬೇಕಿದೆ. ರಾಬಿನ್ ಫಿನಿಶರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸಾಕಷ್ಟು ನಿರೀಕ್ಷೆಗಳಿದ್ದವು. ಅದು ಸಾಧ್ಯವಾಗದಿದ್ದರೆ, ಕನಿಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಅಗತ್ಯ ನೆರವನ್ನಾದರೂ ನೀಡಬೇಕಿತ್ತು’
‘ಅವರು ತಮ್ಮ ಮೇಲಿನ ನಿರೀಕ್ಷೆಗಳನ್ನು ತಲುಪಲೇಬೇಕಿದೆ. ರಿಯಾನ್ ಪರಾಗ್ ಅವರೂ ಉತ್ತಮವಾಗಿ ಆಡಿಲ್ಲ. ಇದರಿಂದಾಗಿ ತಂಡವು ಅವಕಾಶದ ನಿರೀಕ್ಷೆಯಲ್ಲಿರುವವರತ್ತ ತಿರುಗಿ ನೋಡುವಂತಾಗಿದೆ. ಜೊತೆಗೆ ಬೆನ್ ಸ್ಟೋಕ್ಸ್ ಬಂದರೆ, ತಂಡದ ಸಂಯೋಜನೆಯು ಸಂಪೂರ್ಣ ಭಿನ್ನವಾಗಿರಲಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತಪ್ಪ ಅವರನ್ನು ಈ ಬಾರಿ ಹರಾಜಿನಲ್ಲಿ ₹ 3 ಕೋಟಿ ನೀಡಿ ಖರೀದಿಸಲಾಗಿದೆ. ಅವರು ಈ ಆವೃತ್ತಿಯಲ್ಲಿ ಆಡಿರುವ 4 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 17, 2, 9 ಮತ್ತು 5 ರನ್ ಗಳಿಸಿದ್ದಾರೆ. ಪರಾಗ್ ಕ್ರಮವಾಗಿ 6, 0, 1 ಮತ್ತು 16 ರನ್ ಮಾತ್ರವೇ ಗಳಿಸಿದ್ದಾರೆ. ರಾಯಲ್ಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವುದರಿಂದ ಈ ಇಬ್ಬರೂ ಶೀಘ್ರವೇ ಫಾರ್ಮ್‌ಗೆ ಮರಳುವುದು ಅನಿವಾರ್ಯವಾಗಿದೆ.
ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ತಂಡದ ನಾಯಕರಾಗಿದ್ದ ಗಂಭೀರ್, ತಮ್ಮ ತಂಡಕ್ಕೆ ಎರಡು ಬಾರಿಪ್ರಶಸ್ತಿ ಗೆದ್ದುಕೊಟ್ಟಿದ್ದರು. ಆಗ ಉತ್ತಪ್ಪ ಅವರೂ ಗಂಭೀರ್ ತಂಡದಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.