ADVERTISEMENT

ಐಪಿಎಲ್‌ಗೆ 15 ವರ್ಷಗಳ ಸಂಭ್ರಮ; ವಿಶೇಷ ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2022, 11:04 IST
Last Updated 18 ಏಪ್ರಿಲ್ 2022, 11:04 IST
ಚಿತ್ರ ಕೃಪೆ: Twitter/@IPL
ಚಿತ್ರ ಕೃಪೆ: Twitter/@IPL   

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15 ವರ್ಷಗಳ ಸಂಭ್ರಮದಲ್ಲಿದೆ. ಈ ಸಂಬಂಧ ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೊ ಹಂಚಿಕೊಳ್ಳಲಾಗಿದೆ.

2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯದೊಂದಿಗೆ ಐಪಿಎಲ್‌ಗೆ ಚಾಲನೆ ದೊರಕಿತ್ತು. ಚೊಚ್ಚಲ ಪಂದ್ಯದಲ್ಲೇ ಕೆಕೆಆರ್‌ನ ಬ್ರೆಂಡನ್ ಮೆಕಲಮ್ ಶತಕ ಗಳಿಸುವ ಮೂಲಕ ಐಪಿಎಲ್‌ ಕಿಚ್ಚು ಹೊತ್ತಿಸಿದ್ದರು.

ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತ್ತು.

2009ರಲ್ಲಿ ಅನಿಲ್ ಕುಂಬ್ಳೆ ಐದು ರನ್ನಿಗೆ ಐದು ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದರು. ಅದೇ ಸಾಲಿನಲ್ಲಿ ಮನೀಶ್ ಪಾಂಡೆ, ಐಪಿಎಲ್‌ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿದ್ದರು.

2011ರಲ್ಲಿ ಸಚಿನ್ ತೆಂಡೂಲ್ಕರ್ ಚೊಚ್ಚಲ ಐಪಿಎಲ್ ಶತಕ ಗಳಿಸಿದ್ದರು. 2013ರಲ್ಲಿ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ (175*) ಗಳಿಸಿದ್ದರು.

2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕು ಐಪಿಎಲ್ ಶತಕಗಳನ್ನು ಸಿಡಿಸಿದ್ದರು. 2021ರಲ್ಲಿ ರವೀಂದ್ರ ಜಡೇಜ ಒಂದೇ ಓವರ್‌ನಲ್ಲಿ 37 ಸಿಡಿಸುವ ಮೂಲಕ ಅಬ್ಬರಿಸಿದ್ದರು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ದಾಖಲೆಯ ಐದು ಬಾರಿ ಟ್ರೋಫಿ ಗೆದ್ದಿವೆ. ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಎರಡು ಬಾರಿ ಪ್ರಶಸ್ತಿ ಜಯಿಸಿವೆ.

ಈ ಬಾರಿ ಒಟ್ಟು10 ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಟ್ರೋಫಿಯ ಹುಡುಕಾಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.