
ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ
ನವದೆಹಲಿ: ಭರವಸೆಯ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು, 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಸ್ಫೋಟಕ ಬ್ಯಾಟಿಂಗ್‌ನಿಂದ ಹೆಸರಾಗಿರುವ ವೈಭವ್ ಸೂರ್ಯವಂಶಿ ಅವರ ಆಟದ ಮೇಲೆಯೂ ಕುತೂಹಲವಿದೆ.
ದುಬೈನಲ್ಲಿ ಡಿಸೆಂಬರ್ 12 ರಿಂದ 21ರವರೆಗೆ ಈ ಟೂರ್ನಿ ನಡೆಯಲಿದ್ದು, 15 ಆಟಗಾರರ ತಂಡವನ್ನು ಶುಕ್ರವಾರ ಪ್ರಕಟಿಸಲಾಯಿತು.
ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಬಹು ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ ಭಾರತ ತಂಡವನ್ನೂ ಮ್ಹಾತ್ರೆ ಮುನ್ನಡೆಸಿದ್ದರು.
ಜನವರಿ ಮತ್ತು ಫೆಬ್ರುವರಿಯಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುಲಿರುವ 19 ವರ್ಷದೊಳಗಿನವರ ವಿಶ್ವಕಪ್‌ಗೆ ಸಜ್ಜಾಗಲು ಈ ಟೂರ್ನಿ ನೆರವಾಗಲಿದೆ.
14 ವರ್ಷ ವಯಸ್ಸಿನ ಸೂರ್ಯವಂಶಿ ಇತ್ತೀಚೆಗಷ್ಟೇ ರೈಸಿಂಗ್ ಸ್ಟಾರ್ ಏಷ್ಯಾ ಕಪ್‌ನಲ್ಲಿ 32 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಪುರುಷರ ಟಿ20 ಮಾದರಿಯಲ್ಲಿ ಮೂರನೇ ಅತಿ ವೇಗದ ಶತಕವೆನಿಸಿತ್ತು. ಯುಎಇ ವಿರುದ್ಧ ಅವರು ಆ ಪಂದ್ಯದಲ್ಲಿ 42 ಎಸೆತಗಳಲ್ಲಿ 144 ರನ್ ಬಾರಿಸಿದ್ದರು.
ಭಾರತವು ಡಿ 12ರಂದು ಅರ್ಹತಾ ಸುತ್ತಿನಿಂದ ಆಯ್ಕೆಯಾಗುವ ತಂಡವನ್ನು (ಇನ್ನೂ ಖಚಿತವಾಗಿಲ್ಲ) ಎದುರಿಸಲಿದೆ. 14ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. 16ರಂದು ಕೊನೆಯ ಲೀಗ್ ಪಂದ್ಯ ಆಡಲಿದೆ. 19ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. 21ರಂದು ಫೈನಲ್ ನಡೆಯಲಿದೆ.
ತಂಡ ಇಂತಿದೆ:
ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ (ಉಪ ನಾಯಕ), ವೇದಾಂತ್ ತ್ರಿವೇದಿ, ಅಭಿಗ್ಯಾನ್ ಕುಂಡು (ವಿಕೆಟ್ ಕೀಪರ್), ಹರವಂಶ ಸಿಂಗ್ (ವಿಕೆಟ್ ಕೀಪರ್), ಯುವರಾಜ್ ಗೋಹಿಲ್, ಕನಿಷ್ಕ್ ಚೌಹಾನ್, ಖಿಲಾನ್ ಎ. ಪಟೇಲ್, ನಮನ್ ಪುಷ್ಪಕ್, ಡಿ.ದೀಪೇಶ್, ಹೆನಿಲ್ ಪಟೇಲ್, ಕಶಿನ್ ಕುಮಾರ್ ಸಿಂಗ್, ಉಧವ್ ಮೋಹನ್. ಆರನ್ ಜಾರ್ಜ್.
ಸ್ಟ್ಯಾಂಡ್ ಬೈ ಆಟಗಾರರು: ರಾಹುಲ್ ಕುಮಾರ್, ಜೆ. ಹೇಮಚುದೇಶನ್, ಬಿ.ಕೆ. ಕಿಶೋರ್, ಆದಿತ್ಯ ರಾವತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.