ADVERTISEMENT

19 ವರ್ಷದೊಳಗಿನ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಅಮೆರಿಕ ಸವಾಲು

ಪಿಟಿಐ
Published 14 ಜನವರಿ 2026, 23:31 IST
Last Updated 14 ಜನವರಿ 2026, 23:31 IST
ವೈಭವ್‌ ಸೂರ್ಯವಂಶಿ
ವೈಭವ್‌ ಸೂರ್ಯವಂಶಿ   

ಬುಲವಾಯೊ (ಜಿಂಬಾಬ್ವೆ): ಆಯುಷ್‌ ಮಾತ್ರೆ ನಾಯಕತ್ವದ ಭಾರತ ತಂಡವು 19 ವರ್ಷದೊಳಗಿನ ವಿಶ್ವಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಗುರುವಾರ ಅಮೆರಿಕ ತಂಡದ ವಿರುದ್ಧ ಅಭಿಯಾನ ಆರಂಭಿಸಲಿದೆ. 

ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡ ಭಾರತ ತಂಡವು ದಾಖಲೆಯ ಆರನೇ ಬಾರಿ ಕಿರೀಟವನ್ನು ಜಯಿಸುವ ಛಲದಲ್ಲಿದೆ. 1988ರಿಂದ ನಡೆದ 16 ಆವೃತ್ತಿಗಳಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಭಾರತವು ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

2000, 2008, 2012, 2018 ಮತ್ತು 2022ರಲ್ಲಿ ಭಾರತ ಪ್ರಶಸ್ತಿ ಗೆದ್ದಿದೆ. 2024ರ ಕೊನೆಯ ಆವೃತ್ತಿಯಲ್ಲಿ ಭಾರತ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 79 ರನ್‌ಗಳಿಂದ ಸೋತಿತ್ತು. 

ADVERTISEMENT

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೇನ್ ವಿಲಿಯಮ್ಸನ್, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್‌ರಂತಹ ಸ್ಟಾಋ್‌ ಆಟಗಾರರು ಈ ಟೂರ್ನಿಯ ಮೂಲಕವೇ ಆರಂಭದಲ್ಲಿ ಗಮನ ಸೆಳೆದವರು. ಇದು ಕ್ರಿಕೆಟ್ ಜಗತ್ತಿಗೆ ಅವರ ಅಸಾಧಾರಣ ಪ್ರತಿಭೆಯ ಆರಂಭಿಕ ನೋಟವನ್ನು ನೀಡಿತು.

ಭಾರತದ ಪ್ರಸ್ತುತ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಕೂಡ 2018ರ ಆವೃತ್ತಿಯಲ್ಲಿ ಗಮನ ಸೆಳೆದಿದ್ದರು. ಪೃಥ್ವಿ ಶಾ ನಾಯಕತ್ವದಲ್ಲಿ ಭಾರತ ತಂಡ ಕಿರೀಟ ಗೆದ್ದಿತ್ತು. ಶಾ ಅವರು ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಉತ್ತಮ ಆರಂಭ ಪಡೆದರೂ ನಂತರದಲ್ಲಿ ಮಂಕಾದರು.

14ರ ಪೋರ ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ, ಉಪನಾಯಕ ವಿಹಾನ್ ಮಲ್ಹೋತ್ರಾ, ಅಗ್ರ ಕ್ರಮಾಂಕದ ಬ್ಯಾಟರ್‌ ಆರನ್ ಜಾರ್ಜ್ ಮತ್ತು ಅಭಿಗ್ಯಾನ್ ಕುಂದು ಭಾರತದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಉತ್ಕರ್ಷ್ ಶ್ರೀವಾಸ್ತವ ನಾಯಕತ್ವದ ಅಮೆರಿಕ ತಂಡವು ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

ಭಾರತ ತಂಡವು ನ್ಯೂಜಿಲೆಂಡ್, ಅಮೆರಿಕ ಮತ್ತು ಬಾಂಗ್ಲಾದೇಶದೊಂದಿಗೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತವು ಅಮೆರಿಕ ವಿರುದ್ಧದ ಪಂದ್ಯದ ನಂತರ, 17ರಂದು ಬಾಂಗ್ಲಾ ವಿರುದ್ಧ ಮತ್ತು 24ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ 16 ತಂಡಗಳ ಟೂರ್ನಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ತಾಂಜಾನಿಯಾ ಮತ್ತು ಜಪಾನ್‌ ತಂಡಗಳು ಕಣಕ್ಕಿಳಿದಿವೆ. ತಾಂಜಾನಿಯಾ ಇದೇ ಮೊದಲ ಬಾರಿ ವಿಶ್ವಕಪ್‌ ಟೂರ್ನಿ ಆಡುತ್ತಿದೆ. ಜಪಾನ್ ತಂಡಕ್ಕೆ ಇದು ಎರಡನೇ ಟೂರ್ನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.