ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ತಂಡದಲ್ಲಿ ಉಮೇಶ್‌, ಶಮಿ, ಹನುಮ

ಮಯಂಕ್‌, ರಾಹುಲ್‌ಗೆ ಇಲ್ಲ ಸ್ಥಾನ

ಪಿಟಿಐ
Published 15 ಜೂನ್ 2021, 15:09 IST
Last Updated 15 ಜೂನ್ 2021, 15:09 IST
ಉಮೇಶ್ ಯಾದವ್ –ಪಿಟಿಐ ಚಿತ್ರ
ಉಮೇಶ್ ಯಾದವ್ –ಪಿಟಿಐ ಚಿತ್ರ   

ಸೌತಾಂಪ್ಟನ್‌: ವೇಗಿಗಳಾದ ಉಮೇಶ್ ಯಾದವ್‌, ಮೊಹಮ್ಮದ್ ಶಮಿ ಮತ್ತು ಬ್ಯಾಟ್ಸ್‌ಮನ್ ಹನುಮ ವಿಹಾರಿ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯಕ್ಕೆ 15 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು ಕರ್ನಾಟಕದ ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರನ್ನು ಕೈಬಿಡಲಾಗಿದೆ.

ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಹೀರೊ ಶಾರ್ದೂಲ್ ಠಾಕೂರ್ ಸ್ಥಾನ ಕಳೆದುಕೊಂಡಿದ್ದಾರೆ. ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಅವರಿಗೂ ಸ್ಥಾನ ಸಿಗಲಿಲ್ಲ. ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಯಲ್ಲಿ ಮಿಂಚಿದ್ದ ಅಕ್ಷರ್ ಪಟೇಲ್‌ ಕೂಡ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಜೂನ್‌ 18ರಿಂದ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೆಣಸಲಿದೆ.

ADVERTISEMENT

ತಂಡವನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಅಭ್ಯಾಸ ಮಾಡಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಳಗದ ಎದುರಾಳಿ ತಂಡದ ನಾಯಕತ್ವ ರಾಹುಲ್ ಅವರಿಗೆ ನೀಡಲಾಗಿತ್ತು. ಆದರೆ ತಂಡದ ಆಯ್ಕೆ ವೇಳೆ ಅವರನ್ನು ಕಡೆಗಣಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ಆಡಿದವರಿಗೆ ಆದ್ಯತೆ ನೀಡಲಾಗಿದೆ. ಕಾಯ್ದಿರಿಸಿದ ಪಟ್ಟಿಯಲ್ಲಿದ್ದವರಿಗೆ ಅವಕಾಶ ನಿರಾಕರಿಸಲಾಗಿದೆ.

ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ್ದಲ್ಲದೆ ಏಳು ವಿಕೆಟ್‌ಗಳನ್ನೂ ಕಬಳಿಸಿದ್ದ ಶಾರ್ದೂಲ್ ಬದಲಿಗೆ ಉಮೇಶ್ ಯಾದವ್‌ಗೆ ಸ್ಥಾನ ನೀಡಲಾಗಿದೆ. ಉಮೇಶ್‌, ಶಮಿ ಮತ್ತು ಹನುಮ ವಿಹಾರಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡಿದ್ದರು. ‌ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ತಂಡದಲ್ಲಿರುವುದರಿಂದ ಅಕ್ಷರ್ ಪಟೇಲ್ ಸ್ಥಾನ ಕಳೆದುಕೊಂಡಿದ್ದಾರೆ.

ತಂಡ: ವಿರಾಟ್ ಕೊಹ್ಲಿ (ನಾಯಕ), ಶುಭಮನ್ ಗಿಲ್‌, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್‌ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್‌, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಉಮೇಶ್ ಯಾದವ್‌, ಹನುಮ ವಿಹಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.