ADVERTISEMENT

ಸಿಡ್ನಿ | ಇಂಗ್ಲೆಂಡ್ ವಿರುದ್ಧ ಪಂದ್ಯ: ಕೊನೆ ಟೆಸ್ಟ್‌ ಆಡಲಿರುವ ಉಸ್ಮಾನ್ ಖ್ವಾಜಾ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 0:08 IST
Last Updated 3 ಜನವರಿ 2026, 0:08 IST
ಉಸ್ಮಾನ್ ಖ್ವಾಜಾ
ಉಸ್ಮಾನ್ ಖ್ವಾಜಾ   

ಸಿಡ್ನಿ: ಈಗಾಗಲೇ ಆ್ಯಷಸ್‌ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆರಂಭ ಆಟಗಾರ ಉಸ್ಮಾನ್ ಖ್ವಾಜಾ ಅವರಿಗೆ ಬೀಳ್ಕೊಡುಗೆ ನೀಡಲಿದೆ. ಸಿಡ್ನಿಯಲ್ಲಿ ಭಾನುವಾರ ಆರಂಭವಾಗುವ ಈ ಪಂದ್ಯ ಎಡಗೈ ಆಟಗಾರನಿಗೆ  88ನೇ ಹಾಗೂ ಅಂತಿಮ ಟೆಸ್ಟ್‌ ಆಗಲಿದೆ.

ಆಸ್ಟ್ರೇಲಿಯಾ ಸರಣಿಯ ಮೊದಲ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಜಯಗಳಿಸಿತ್ತು. ಮೆಲ್ಬರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್ ಎರಡು ದಿನಗಳ ಒಳಗೆ ಜಯಿಸಿತ್ತು.

ಸಿಡ್ನಿಯ ಪಂದ್ಯ ತಮ್ಮ ಪಾಲಿನ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿರಲಿದೆ ಎಂದು ಪಾಕಿಸ್ತಾನ ಸಂಜಾತ ಬ್ಯಾಟರ್ ಶುಕ್ರವಾರ ತಿಳಿಸಿದ್ದಾರೆ. 2011ರಲ್ಲಿ ಇದೇ ತಂಡದ ವಿರುದ್ಧ ಇದೇ ಮೈದಾನದಲ್ಲಿ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು.

ADVERTISEMENT

‘ಕೊನೆಯ ಬಾರಿ ಕ್ರೀಡಾಂಗಣಕ್ಕೆ ಕೃತಜ್ಞತೆ ಮತ್ತು ನಿರಾಳಭಾವದೊಡನೆ ಇಳಿಯಲಿದ್ದೇನೆ. ಸಲಾಂ ಹೇಳುವೆ’ ಎಂದಿದ್ದಾರೆ 39 ವರ್ಷ ವಯಸ್ಸಿನ ಖ್ವಾಜಾ.

ಇಂಗ್ಲೆಂಡ್ ತಂಡಕ್ಕೆ ಬಶೀರ್, ಪಾಟ್ಸ್‌ (ಎಎಫ್‌ಪಿ ವರದಿ): ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್‌ ಮತ್ತು ಸ್ಪಿನ್ನರ್ ಶೋಯೆಬ್ ಬಶೀರ್ ಅವರನ್ನು ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಡುವ ಇಂಗ್ಲೆಂಡ್‌ ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ.

ಆಸ್ಟ್ರೇಲಿಯಾ ಸರಣಿಯಲ್ಲಿ 3–1 ಮುನ್ನಡೆ ಪಡೆದಿದೆ.

ಮೂಲ 16ರ ತಂಡದಲ್ಲಿದ್ದ ಪಾಟ್ಸ್‌  ಇದುವರೆಗೆ ಆಡುವ ಅವಕಾಶ ಪಡೆದಿರಲಿಲ್ಲ. ಮೆಲ್ಬರ್ನ್‌ ಟೆಸ್ಟ್‌ ಪಂದ್ಯದಲ್ಲಿ ಗಸ್ ಅಟ್ಕಿನ್ಸನ್ ಗಾಯಾಳಾದ ಕಾರಣ ಪಾಟ್ಸ್‌ ಆಡುವ ಸಂಭವವಿದೆ.

ತಂಡ ಇಂತಿದೆ: ಬೆನ್ ಸ್ಟೋಕ್ಸ್‌ (ನಾಯಕ), ಶೋಯೆಬ್ ಬಶೀರ್‌, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್‌, ಬ್ರೈಡನ್ ಕಾರ್ಸ್, ಜಾಕ್ ಕ್ರಾಲಿ, ಬೆನ್ ಡಕೆಟ್‌, ವಿಲ್ ಜಾಕ್ಸ್, ಮ್ಯಾಥ್ಯೂ ಪಾಟ್ಸ್‌, ಜೋ ರೂಟ್‌, ಜೇಮಿ ಸ್ಮಿತ್ ಮತ್ತು ಜೋಶ್ ಟಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.