
ಎ.ಬಿ. ಡಿವಿಲಿಯರ್ಸ್ ಹಾಗೂ ವೈಭವ್ ಸೂರ್ಯವಂಶಿ
ರಾಂಚಿ: ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ತಮ್ಮ ಕೋಟಾದ ಮೊದಲ ಪಂದ್ಯದಲ್ಲಿ ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳು ಮುಖಾಮಖಿಯಾಗಿವೆ. ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.
ಶತಕದ ಬಳಿಕವೂ ಮಿಂಚಿನ ಪ್ರದರ್ಶನ ತೋರಿದ ವೈಭವ್, ಕೇವಲ 84 ಎಸೆತಗಳಲ್ಲಿ 190 ರನ್ ಸಿಡಿಸಿ ದ್ವಿಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಅವರು 226ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದರು.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ 150
36 ಎಸೆತಗಳಿಗೆ ಶತಕ ಸಿಡಿಸಿದ ಅವರು, ಶತಕದ ಬಳಿ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅರುಣಾಚಲ ಪ್ರದೇಶ ಬೌಲರ್‌ಗಳ ಮೇಲೆ ಸವಾರಿ ಮಾಡಿದ ವೈಭವ್ ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದರು. ಅವರು ಕೇವಲ 54 ಎಸೆತಗಳಲ್ಲಿ 150 ರನ್ ಬಾರಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 150 ರನ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.
ಎ.ಬಿ. ಡಿವಿಲಿಯರ್ಸ್ ದಾಖಲೆ ಮುರಿದ ವೈಭವ್
ಏಕದಿನ ಕ್ರಿಕೆಟ್ನ ಲಿಸ್ಟ್ ಎ ನಲ್ಲಿ ಅತೀ ವೇಗವಾಗಿ 150 ರನ್ ಗಳಿಸಿದ ವಿಶ್ವ ದಾಖಲೆ ಹೊಂದಿದ್ದ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎ.ಬಿ. ಡಿವಿಲಿಯರ್ಸ್ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಡಿವಿಲಿಯರ್ಸ್ ಅವರು 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 64 ಎಸೆತಗಳಲ್ಲಿ 150 ರನ್ ಪೂರೈಸಿದ್ದರು.
15 ಸಿಕ್ಸರ್, 16 ಬೌಂಡರಿ
ಅಂತಿಮವಾಗಿ ಅವರು 84 ಎಸೆತಗಳಲ್ಲಿ ಆಕರ್ಷಕ 15 ಸಿಕ್ಸರ್‌ಗಳು ಹಾಗೂ 16 ಬೌಂಡರಿಗಳ ನೆರವಿನಿಂದ 190 ರನ್ ಗಳಿಸಿ ಔಟ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.