ADVERTISEMENT

ಐಪಿಎಲ್‌ನಿಂದ ಹೊರಬಿದ್ದ ವಿಘ್ನೇಶ್‌, ಮ್ಯಾಕ್ಸ್‌ವೆಲ್‌, ಸಂದೀಪ್‌ ಶರ್ಮಾ

ಪಿಟಿಐ
Published 1 ಮೇ 2025, 22:40 IST
Last Updated 1 ಮೇ 2025, 22:40 IST
   

ಚೆನ್ನೈ/ ಜೈಪುರ: ಪಂಜಾಬ್‌ ಕಿಂಗ್ಸ್‌ ತಂಡದಲ್ಲಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಬೆರಳಿನ ಮೂಳೆ ಮುರಿತದಿಂದಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ ಎಂದು ಫ್ರಾಂಚೈಸಿ ಗುರುವಾರ ಪ್ರಕಟಿಸಿದೆ. ರಾಜಸ್ಥಾನ ರಾಯಲ್ಸ್‌ ತಂಡದ ಮಧ್ಯಮ ವೇಗಿ ಸಂದೀಪ್‌ ಶರ್ಮಾ ಅವರೂ ಇದೇ ಕಾರಣದಿಂದ ಹಾಲಿ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಮುಂಬೈ ತಂಡದ ಸ್ಪಿನ್ನರ್ ವಿಘ್ನೇಶ್ ಮೊಣಗಂಟಿನ ಮೂಳೆ ನೋವಿನಿಂದಾಗಿ ಲೀಗ್‌ನ ಉಳಿದ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.

ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್‌ವೆಲ್‌ ಬೆರಳಿಗೆ ಗಾಯವಾಗಿತ್ತು.  ‘ಐಪಿಎಲ್‌ನ ಉಳಿದ ಪಂದ್ಯಗಳಿಗೆ ಮ್ಯಾಕ್ಸ್‌ವೆಲ್‌ ಆಡಲಾಗುತ್ತಿಲ್ಲ. ಅವರ ಶೀಫ್ರ ಚೇತರಿಕೆಗೆ ನಾವು ಹಾರೈಸುತ್ತೇವೆ’ ಎಂದು ಕಿಂಗ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದೆ.

ADVERTISEMENT

ಮ್ಯಾಕ್ಸ್‌ವೆಲ್‌ ಪಾಲಿಗೆ ಈ ಬಾರಿಯ ಐಪಿಎಲ್‌ ನಿರಾಶಾದಾಯಕವಾಗಿ ಪರಿಣಮಿಸಿದೆ. ಏಳು ಪಂದ್ಯಗಳಲ್ಲಿ ಅವರು ಗಳಿಸಿದ್ದು ಬರೇ 48 ರನ್‌ಗಳನ್ನು. ಇದರ ಜೊತೆಗೆ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ. ಮ್ಯಾಕ್ಸ್‌ವೆಲ್‌ ಬದಲು ಸೂಕ್ತ ಆಟಗಾರನ ಸೇರ್ಪಡೆಗೆ ಯತ್ನ ಜಾರಿಯಲ್ಲಿದೆ ಎಂದು ಕಿಂಗ್ಸ್‌ ಕೋಚ್‌ ರಿಕಿ ಪಾಂಟಿಂಗ್‌ ಹೇಳಿದರು. 

ಶರ್ಮಾ ಅಲಭ್ಯ: 

ರಾಜಸ್ಥಾನ ರಾಯಲ್ಸ್‌ ತಂಡದ ಮಧ್ಯಮ ವೇಗದ ಬೌಲರ್‌ ಸಂದೀಪ್‌ ಶರ್ಮಾ ಬೆರಳಿನ ಮೂಳೆ ಮುರಿತದಿಂದ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರು ಈ ಬಾರಿ ಆಡಿದ 10 ಪಂದ್ಯಗಳಲ್ಲಿ 9 ವಿಕಟ್‌ ಪಡೆದಿದ್ದರು.

ವಿಘ್ನೇಶ್‌ ಬದಲು ರಘು ಶರ್ಮಾ:

ಮೊಣಗಂಟಿನ ಮೂಳೆ ನೋವಿನಿಂದಾಗಿ ಮುಂಬೈ ಇಂಡಿಯನ್ಸ್‌ ತಂಡದ ಎಡಗೈ ಸ್ಪಿನ್ನರ್‌ ವಿಘ್ನೇಶ್‌ ಪುತ್ತೂರು ಅವರೂ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.  ಅವರ ಬದಲು ತಂಡವು ಲೆಗ್‌ಸ್ಪಿನ್ನರ್‌ ರಘು ಶರ್ಮಾ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.

31 ವರ್ಷದ ರಘು ಶರ್ಮಾ ಅವರು ಮುಂಬೈ ನೆರವು ಸಿಬ್ಬಂದಿ ತಂಡದಲ್ಲಿ ದ್ದರು. ಈಗ ಅವರು ಮುಖ್ಯ ತಂಡವನ್ನು ಸೇರಿಕೊಳ್ಳಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಪುದುಚೇರಿ ತಂಡಕ್ಕೆ ಆಡುತ್ತಾರೆ. ಅವರು 11 ಪ್ರಥಮ ದರ್ಜೆ ಪಂದ್ಯಗಳಿಂದ 19.59 ಸರಾಸರಿಯಲ್ಲಿ 57 ವಿಕೆಟ್‌ಗಳನ್ನು ಪಡೆದಿದ್ದಾರೆ. 56ಕ್ಕೆ7 ಅವರ ಶ್ರೇಷ್ಠ ಸಾಧನೆ.

ವಿಘ್ನೇಶ್‌ ಈ ಋತುವಿನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಚೆನ್ನೈ ವಿರುದ್ಧ ಮೂರು ವಿಕೆಟ್‌ಗಳನ್ನು ಪಡೆದು
ಗಮನಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.