ವಿಹಾನ್ ಮಲ್ಹೋತ್ರಾ
(ಬಿಸಿಸಿಐ ಚಿತ್ರ)
ಬುಲಾವಯೊ: ವಿಹಾನ್ ಮಲ್ಹೋತ್ರಾ ಅಮೋಘ ಶತಕದ (109*) ನೆರವಿನಿಂದ ಭಾರತ ತಂಡವು 19 ವರ್ಷದೊಳಗಿನವರ ಯುವ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಮಂಗಳವಾರ) ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ 204 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ.
ಇದರೊಂದಿಗೆ ಸೂಪರ್ ಸಿಕ್ಸ್‌ನ ಎರಡನೇ ಗುಂಪಿನಲ್ಲಿ ಸತತ ಮೂರನೇ ಗೆಲುವು ದಾಖಲಿಸಿರುವ ಭಾರತ ಒಟ್ಟು ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೆ +3.337ರ ರನ್ ರೇಟ್ ಕಾಯ್ದುಕೊಂಡಿದೆ.
ವಿಹಾನ್ ಅಮೋಘ ಶತಕ ಮತ್ತು ವೈಭವ್ ಸೂರ್ಯವಂಶಿ (52) ಹಾಗೂ ಅಭಿಜ್ಞಾನ್ ಕುಂಡು (61) ಅರ್ಧಶತಕಗಳ ನೆರವಿನಿಂದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 352 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಈ ಗುರಿ ಬೆನ್ನಟ್ಟಿದ ಆತಿಥೇಯ ಜಿಂಬಾಬ್ವೆ 37.4 ಓವರ್‌ಗಳಲ್ಲೇ 148 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಲೀರಾಯ್ ಚಿವಾಲಾ ಗರಿಷ್ಠ 62 ರನ್ ಗಳಿಸಿದರು. ಭಾರತದ ಪರ ಉಧವ್ ಮೋಹನ್ ಹಾಗೂ ನಾಯಕ ಆಯುಷ್ ಮ್ಹಾತ್ರೆ ತಲಾ ಮೂರು ವಿಕೆಟ್ ಗಳಿಸಿದರು.
107 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದ ವಿಹಾನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.