ADVERTISEMENT

ವಿಜಯ್ ಹಜಾರೆ ಟ್ರೋಫಿ: ಮಿನುಗಿದ ಮಿಥುನ್, ಮುಗ್ಗರಿಸಿದ ಮುಂಬೈ

ಶಿವಂ ಶತಕ ವ್ಯರ್ಥ; ಕರ್ನಾಟಕಕ್ಕೆ ಗೆಲುವು

ಗಿರೀಶದೊಡ್ಡಮನಿ
Published 10 ಅಕ್ಟೋಬರ್ 2019, 20:01 IST
Last Updated 10 ಅಕ್ಟೋಬರ್ 2019, 20:01 IST
ಕರ್ನಾಟಕದ ಜಯದ ರೂವಾರಿಯಾದ ಅಭಿಮನ್ಯು ಮಿಥುನ್ –ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮಾ
ಕರ್ನಾಟಕದ ಜಯದ ರೂವಾರಿಯಾದ ಅಭಿಮನ್ಯು ಮಿಥುನ್ –ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮಾ   

ಬೆಂಗಳೂರು: ಶಿವಂ ದುಬೆಯ ಸಿಕ್ಸರ್‌ಗಳ ಸುರಿಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಕರ್ನಾಟಕದ ನಾವೆಯನ್ನು ಮಧ್ಯಮವೇಗಿ ಅಭಿಮನ್ಯು ಮಿಥುನ್ ಗೆಲುವಿನ ದಡಕ್ಕೆ ಸೇರಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ‘ಎ’ ಗುಂಪಿನ ರೋಚಕ ಪಂದ್ಯದಲ್ಲಿ ಮಿಛುನ್ ಮ್ಯಾಜಿಕ್ ಕೆಲಸ ಮಾಡಿತು. ಹಾಲಿ ಚಾಂಪಿಯನ್ ಮುಂಬೈ ತಂಡದ ವಿರುದ್ಧ ಕರ್ನಾಟಕವು 9 ರನ್‌ಗಳಿಂದ ಜಯಿಸಿತು. ಇದರಿಂದಾಗಿ ಕರ್ನಾಟಕವು ಎಂಟರ ಘಟ್ಟಕ್ಕೆ ಪ್ರವೇಶಿಸುವ ಹಾದಿ ಮತ್ತಷ್ಟು ಸುಲಭವಾಯಿತು.

ಹತ್ತು ಸಿಕ್ಸರ್‌ಗಳು, ಏಳು ಆಕರ್ಷಕ ಬೌಂಡರಿಗಳನ್ನು ಸಿಡಿಸಿದ್ದ ಶಿವಂ ಶರವೇಗದ ಶತಕ (118; 67ಎಸೆತ) ವ್ಯರ್ಥವಾಯಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈಗೆ, ಕರ್ನಾಟಕವು 312 ರನ್‌ಗಳ ಗೆಲುವಿನ ಗುರಿ ಒಡ್ಡಿತು. ಮುಂಬೈ ತಂಡವು ಕೃಷ್ಣಪ್ಪ ಗೌತಮ್ ಸ್ಪಿನ್ ದಾಳಿಗೆ ನಲುಗಿತ್ತು. ಕೇವಲ 169 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.

ADVERTISEMENT

ಈ ಹಂತದಲ್ಲಿ ಕ್ರೀಸ್‌ಗೆ ಕಾಲಿಟ್ಟ ಎಡಗೈ ಬ್ಯಾಟ್ಸ್‌ಮನ್ ದುಬೆ ‘ಟ್ವಿಂಟಿ–20’ ಮಾದರಿಯ ಬ್ಯಾಟಿಂಗ್ ಮಾಡಿದರು. ಇನ್ನೊಂದು ಬದಿಯಲ್ಲಿ ಧ್ರುಮಿಲ್ ಮಟ್ಕರ್ ಔಟಾದ ನಂತರ ಕ್ರೀಸ್‌ಗೆ ಬಂದಿದ್ದ ಶಾರ್ದೂಲ್ ಠಾಕೂರ್ ಅವರು ಶಿವಂ ಬ್ಯಾಟಿಂಗ್‌ಗೆ ಹೆಚ್ಚು ಅವಕಾಶ ಕೊಟ್ಟು ಸುಮ್ನನಿದ್ದರು.

ಆಗಸದಲ್ಲಿದ್ದ ಕಪ್ಪು ಮೋಡಗಳು ನಿಧಾನವಾಗಿ ಚದುರಿದವು. ಶಿವಂ ಬ್ಯಾಟ್‌ನಿಂದ ರನ್‌ಗಳ ಮಳೆ ಸುರಿ ಯಿತು. ಅವರು ತಮ್ಮ ತಂಡವನ್ನು ಜಯದ ಸನಿಹಕ್ಕೆ ತಂದು ನಿಲ್ಲಿಸಿಬಿಟ್ಟರು. ಕರ್ನಾಟಕ ತಂಡದ ನಾಯ‌ಕ ಪಾಂಡೆ ಬೌಲರ್‌ಗಳನ್ನು ಕಣಕ್ಕಿಳಿಸುವಲ್ಲಿ ಮಾಡಿದ ಪ್ರಯೋಗಗಳಿಗೆ ಶಿವಂ ಜಗ್ಗಲಿಲ್ಲ. ಆದರೆ 42ನೇ ಓವರ್‌ನಲ್ಲಿ ಮಿಥುನ್ ತಮ್ಮ ಅನುಭವದ ಬತ್ತಳಿಕೆ ಯಿಂದ ಪ್ರಯೋಗಿಸಿದ ಅಸ್ತ್ರವು ಆತಿ ಥೇಯರ ಬಳಗದಲ್ಲಿ ಸಂಭ್ರಮದ ಅಲೆ ಏಳುವಂತೆ ಮಾಡಿತು.

ಈ ಓವರ್‌ನ ಮೊದಲ ಎಸೆತದಲ್ಲಿ ತಮ್ಮ ಹನ್ನೊಂದನೇ ಸಿಕ್ಸರ್‌ ದಾಖಲಿಸುವ ಶಿವಂ ಪ್ರಯತ್ನ ಕೈಕೊಟ್ಟಿತು. ಬೌಂಡರಿಲೈನ್‌ನಲ್ಲಿದ್ದ ಕೆ.ಎಲ್. ರಾಹುಲ್ ಕ್ಯಾಚ್ ಪಡೆದರು. ನಂತರದ 6.1 ಓವರ್‌ಗಳಲ್ಲಿ ನಡೆದ ಕೆಲವು ನಾಟಕೀಯ ತಿರುವುಗಳಲ್ಲಿ ಕೊನೆಗೂ ಕರ್ನಾಟಕ ಜಯಿಸಿತು. ಮುಂಬೈನ ಶಾರ್ದೂಲ್ ಠಾಕೂರ್ (26 ರನ್), ಧವಳ್ ಕುಲಕರ್ಣಿ (11 ರನ್) ಮತ್ತು ತುಷಾರ್ ದೇಶಪಾಂಡೆಯವರ (ಔಟಾಗದೆ 6) ಅವರ ಜಿಗುಟುತನದ ಆಟವು ಮನೀಷ್ ಬಳಗದ ಮೇಲೆ ಒತ್ತಡ ಹೆಚ್ಚಿಸಿತು. 45ನೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಶಾರ್ದೂಲ್ ಎಲ್‌ಬಿಡಬ್ಲ್ಯು ಆದರು. 49ನೇ ಓವರ್‌ನ ಮೊದಲ ಎಸೆತವನ್ನು ಧವಳ್ ಬೌಂಡರಿಗೆ ಹೊಡೆಯಲು ಯತ್ನಿಸಿದರು. ಆದರೆ, ಮಿಡ್‌ಆನ್‌ನಲ್ಲಿದ್ದ ಕರುಣ್ ನಾಯರ್ ಅವರು ಹಿಮ್ಮುಖವಾಗಿ ಓಡಿ ಪಡೆದ ಆಕರ್ಷಕ ಕ್ಯಾಚ್‌ ಕರ್ನಾಟಕಕ್ಕೆ ಜಯದ ಕಾಣಿಕೆ ನೀಡಿತು. ಮಿಥುನ್ ಮುಂಬೈ ಡ್ರೆಸ್ಸಿಂಗ್‌ ರೂಮಿನತ್ತ ಕೈತೋರಿಸಿ ಕುಣಿದು ವಿಜಯೋತ್ಸವ ಆಚರಿಸಿದರು.

404 ರನ್ ಗಳಿಸಿದ ಪಾಂಡೆ: ಮನೀಷ್ ಪಾಂಡೆ ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ 400 ರನ್‌ಗಳ ಗಡಿ ದಾಟಿದರು. ಮುಂಬೈ ತಂಡದ ವಿರುದ್ಧ ಅರ್ಧಶತಕ (62; 64ಎಸೆತ, 3ಬೌಂಡರಿ, 2 ಸಿಕ್ಸರ್) ಗಳಿಸಿದರು. ಇದರೊಂದಿಗೆ ಒಟ್ಟು ಆರು ಇನಿಂಗ್ಸ್‌ಗಳಿಂದ 404 ರನ್‌ಗಳನ್ನು ಪೇರಿಸಿದರು. ಇದರಲ್ಲಿ ಒಟ್ಟು ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕ ಸೇರಿವೆ.

ಬೆಳಿಗ್ಗೆ ರಾಹುಲ್ (58 ರನ್) ಮತ್ತು ದೇವದತ್ತ ಪಡಿಕ್ಕಲ್ (79 ರನ್) ಅವರು ಮೊದಲ ವಿಕೆಟ್‌ಗೆ 137 ರನ್‌ಗಳನ್ನು ಸೇರಿಸಿ ಹಾಕಿದ ಭದ್ರ ಅಡಿಪಾಯದ ಮೇಲೆ ಮನೀಷ್ ಪಾಂಡೆ ಉತ್ತಮ ಮೊತ್ತದ ಸೌಧ ಕಟ್ಟುವ ಪ್ರಯತ್ನ ಮಾಡಿದರು. ಕರುಣ್ ನಾಯರ್ ಕೇವಲ ನಾಲ್ಕು ರನ್ ಮಾತ್ರ ಗಳಿಸಿ ರನ್‌ಔಟ್ ಆದರು. ಅಭಿಷೇಕ್ ರೆಡ್ಡಿ ಬದಲು ಸ್ಥಾನ ಪಡೆದ ರೋಹನ್ ಕದಂ (32 ರನ್), ಬಿ.ಆರ್. ಶರತ್ (28 ರನ್) ಮತ್ತು ಕೃಷ್ಣಪ್ಪ ಗೌತಮ್ (ಔಟಾಗದೆ 22) ತಂಡದ ಮೊತ್ತವನ್ನು ಮೂನ್ನೂರರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು
ಕರ್ನಾಟಕ:
50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 312 (ಕೆ.ಎಲ್. ರಾಹುಲ್ 58, ದೇವದತ್ತ ಪಡಿಕ್ಕಲ್ 79, ಮನೀಷ್ ಪಾಂಡೆ 62, ರೋಹನ್ ಕದಂ 32, ಬಿ.ಆರ್. ಶರತ್ 28, ಕೆ. ಗೌತಮ್ 22, ಧವಳ್ ಕುಲಕರ್ಣಿ 44ಕ್ಕೆ1, ಶಾರ್ದೂಲ್ ಠಾಕೂರ್ 54ಕ್ಕೆ1, ಶಂಸ್ ಮುಲಾನಿ 64ಕ್ಕೆ1), ಮುಂಬೈ: 48.1 ಓವರ್‌ಗಳಲ್ಲಿ 303 (ಯಶಸ್ವಿ ಭೂಪೇಂದ್ರ ಜೈಸ್ವಾಲ್ 22, ಆದಿತ್ಯ ತಾರೆ 32, ಸಿದ್ಧಾರ್ಥ್ ಲಾಡ್ 34, ಸೂರ್ಯಕುಮಾರ್ ಯಾಧವ್ 26, ಶಿವಂ ದುಬೆ 118, ಶಾರ್ದೂಲ್ ಠಾಕೂರ್ 26, ಅಭಿಮನ್ಯು ಮಿಥುನ್ 40ಕ್ಕೆ3, ಪ್ರಸಿದ್ಧ ಕೃಷ್ಣ 39ಕ್ಕೆ2, ಕೃಷ್ಣಪ್ಪ ಗೌತಮ್ 51ಕ್ಕೆ3).

ಫಲಿತಾಂಶ: ಕರ್ನಾಟಕ ತಂಡಕ್ಕೆ 9 ರನ್‌ಗಳ ಜಯ ಮತ್ತು ನಾಲ್ಕು ಅಂಕ

**
ಕರ್ನಾಟಕಕ್ಕೆ ಸರಳ; ಮುಂಬೈಗೆ ಕಠಿಣ
ಗುರುವಾರದ ಪಂದ್ಯದಲ್ಲಿ ಸೋತಿರುವ ಹಾಲಿ ಚಾಂಪಿಯನ್ ಮುಂಬೈ ತಂಡವು ಲೀಗ್ ಹಂತದಿಂದಲೇ ಹೊರಬೀಳುವ ಆತಂಕದಲ್ಲಿದೆ. ಆದರೆ ಹೋದ ವರ್ಷ ಲೀಗ್‌ ಹಂತದಲ್ಲಿ ನಿರ್ಗಮಿಸಿದ್ದ ಕರ್ನಾಟಕ ತಂಡವು ಎಂಟರ ಘಟ್ಟಕ್ಕೆ ಸಾಗುವುದು ಬಹುತೇಕ ಖಚಿತವಾಗಿದೆ.

ಹೊಸ ನಿಯಮದ ಪ್ರಕಾರ ಎ ಮತ್ತು ಬಿ ಗುಂಪಿನ ಜಂಟಿ ಪಾಯಿಂಟ್ಸ್‌ ಪಟ್ಟಿಯಿಂದ ಒಟ್ಟು ಐದು ತಂಡಗಳು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸುತ್ತವೆ. ಒಟ್ಟು ಆರು ಪಂದ್ಯಗಳನ್ನು ಆಡಿರುವ ಕರ್ನಾಟಕ ತಂಡವು ಐದರಲ್ಲಿ ಗೆದ್ದು 20 ಪಾಯಿಂಟ್ ಗಳಿಸಿದೆ. ಆದರೆ ಮುಂಬೈ ತಂಡವು ಎರಡು ಗೆದ್ದು, ಎರಡರಲ್ಲಿ ಸೋತಿದೆ. ಇನ್ನೆರಡು ಪಂದ್ಯಗಳು ಮಳೆಯಿಂದಾಗಿ ನಡೆದಿಲ್ಲ. ಆದರೂ ತಂಡವು ಏಳನೇ ಸ್ಥಾನದಲ್ಲಿದೆ.

ಕೇವಲ 12 ಪಾಯಿಂಟ್ಸ್‌ ಗಳಿಸಿದೆ. ಹೈದರಾಬಾದ್, ಪಂಜಾಬ್, ಛತ್ತೀಸಗಡ ಮತ್ತು ಉತ್ತರಪ್ರದೇಶ ತಂಡಗಳು ತಲಾ 14 ಅಂಕ ಗಳಿಸಿವೆ. ಈ ಪಟ್ಟಿಯಲ್ಲಿರುವ ಅಗ್ರ ಏಳು ತಂಡಗಳು ಇನ್ನೂ ತಲಾ ಎರಡು ಪಂದ್ಯಗಳನ್ನು ಆಡಬೇಕಿದೆ. ಕರ್ನಾಟಕವು ಇದೇ 12ರಂದು ಸೌರಾಷ್ಟ್ರ ವಿರುದ್ಧ ಮತ್ತು 16ರಂದು ಗೋವಾ ಎದುರು ಆಡಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.