ADVERTISEMENT

ವಿಜಯ್ ಹಜಾರೆ ಟ್ರೋಫಿ | ಶ್ರೀಜಿತ್–ದುಬೆ ಅಬ್ಬರ; ಕರ್ನಾಟಕಕ್ಕೆ ಶರಣಾದ ಮುಂಬೈ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 13:31 IST
Last Updated 21 ಡಿಸೆಂಬರ್ 2024, 13:31 IST
<div class="paragraphs"><p>ಕೃಷ್ಣನ್ ಶ್ರೀಜಿತ್</p></div>

ಕೃಷ್ಣನ್ ಶ್ರೀಜಿತ್

   

ಅಹಮದಾಬಾದ್: ಮೊಟೇರಾ ಅಂಗಳದಲ್ಲಿ ಶನಿವಾರ ಎರಡು ಶತಕಗಳು ದಾಖಲಾದವು. ಮುಂಬೈನ ಅನುಭವಿ ಆಟಗಾರ ಶ್ರೇಯಸ್ ಅಯ್ಯರ್ ಮತ್ತು ಕರ್ನಾಟಕದ ಉದಯೋನ್ಮುಖ ಬ್ಯಾಟರ್ ಕೃಷ್ಣನ್ ಲಕ್ಷ್ಮಣನ್ ಶ್ರೀಜಿತ್ ಅವರು ಶತಕ ಗಳಿಸಿದರು. ಆದರೆ ಜಯ ಒಲಿದಿದ್ದು ಮಾತ್ರ ಶ್ರೀಜಿತ್ ಅವರ ಆಟಕ್ಕೆ. 

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಬಲಿಷ್ಠ ಮುಂಬೈ ಎದುರು 7 ವಿಕೆಟ್‌ಗಳಿಂದ ಜಯಸಾಧಿಸಿತು. ಅಲ್ಲದೇ ಟೂರ್ನಿಯ ಇತಿಹಾಸದಲ್ಲಿ ಅತಿ ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು. ಅದಕ್ಕೆ ಕಾರಣರಾಗಿದ್ದು ಶ್ರೀಜಿತ್ (ಅಜೇಯ 150; 101ಎ, 4X20, 6X4) ಅವರ ಶತಕ. ಕೆ.ವಿ. ಅನೀಶ್ (82; 66ಎ, 4X9, 6X3) ಹಾಗೂ ಪ್ರವೀಣ ದುಬೆ (65; 50ಎ, 4X5, 6X1) ಅವರೂ ಮಹತ್ವದ ಕಾಣಿಕೆ ನೀಡಿದರು. 

ADVERTISEMENT

ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮಯಂಕ್ ನಿರ್ಧಾರವನ್ನು ತಪ್ಪು ಎಂದು ಅಬ್ಬರದ ಶತಕ ಸಿಡಿಸಿದ ಮುಂಬೈ ನಾಯಕ ಶ್ರೇಯಸ್ ಅಯ್ಯರ್ (114; 55ಎ, 4X5, 6X2) ಸಾಬೀತು ಮಾಡಿದರು. ಅಲ್ಲದೇ ಆಯುಷ್ ಮಾತ್ರ (78; 82ಎ), ಹಾರ್ದಿಕ್ ತಮೋರೆ (84; 94ಎ) ಹಾಗೂ ಶಿವಂ ದುಬೆ (63; 36ಎ) ಅವರೂ ರನ್ ಸೂರೆ ಮಾಡಿದರು.  ಅದರಿಂದಾಗಿ ಮುಂಬೈ ತಂಡವು 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 382 ರನ್ ಗಳಿಸಿತು. ಕರ್ನಾಟಕದ ಬೌಲರ್‌ಗಳು ಬಸವಳಿದರು.

ಹೊಸ ಆಟಗಾರರು ಇರುವ ಕರ್ನಾಟಕ ತಂಡವು ಈ ಬೃಹತ್ ಗುರಿ ಸಾಧಿಸುವುದೇ ಎಂಬ ಅಳುಕು ಆರಂಭದಲ್ಲಿ ಕಾಡಿತ್ತು. ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಯಂಕ್ ಬಳಗವು ನಾಕೌಟ್ ಕೂಡ ಪ್ರವೇಶಿಸಿರಲಿಲ್ಲ. ಅದೇ ಮುಂಬೈ ತಂಡವು ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಇಲ್ಲಿಗೆ ಬಂದಿತ್ತು. ಮುಂಬೈ ಬೌಲರ್‌ಗಳೂ ಕರ್ನಾಟಕದ ಬ್ಯಾಟರ್‌ಗಳನ್ನು ಕಾಡುವ ಆತಂಕ ಇತ್ತು. 

ಆದರೆ, ಪಂದ್ಯದಲ್ಲಿ ಇನ್ನೂ 3.4 ಓವರ್‌ ಬಾಕಿ ಇರುವಾಗಲೇ 3 ವಿಕೆಟ್‌ಗಳಿಗೆ 383 ರನ್ ಗಳಿಸಿತು.  ಈ ಹಿಂದೆ ಆಂಧ್ರ ತಂಡವು 384 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿತ್ತು.

ಇನಿಂಗ್ಸ್‌ ಆರಂಭದಲ್ಲಿ ಕರ್ನಾಟಕದ ನಿಕಿನ್ ಜೋಸ್ (21; 13ಎ) ಐದನೇ ಓವರ್‌ನಲ್ಲಿಯೇ ಜುನೇದ್ ಖಾನ್ ಎಸೆತದಲ್ಲಿ ಔಟಾದರು. ಆಗ ಕ್ರೀಸ್‌ಗೆ ಬಂದ ಅನೀಶ್ ಅವರು ಮಯಂಕ್ (47 ರನ್) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 70 (57ಎಸೆತ) ರನ್ ಸೇರಿಸಿದರು. ಶಿವಂ ದುಬೆ ಬೌಲಿಂಗ್‌ನಲ್ಲಿ ಅಥರ್ವ ಅಂಕೋಲೆಕರ್‌ಗೆ ಕ್ಯಾಚಿತ್ತ ಮಯಂಕ್ ನಿರ್ಗಮಿಸಿದಾಗ ಜೊತೆಯಾಟ ಮುರಿಯಿತು. 

ಕ್ರೀಸ್‌ಗೆ ಬಂದ ಶ್ರೀಜಿತ್ ಅವರು ಅನೀಶ್ ಜೊತೆಗೂಡಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 72  ಎಸೆತಗಳಲ್ಲಿ 94 ರನ್ ಗಳಿಸಿದರು. ಬೌಲರ್ ಜುನೇದ್ ಅವರು ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಅವರು ಅನೀಶ್ ವಿಕೆಟ್ ಗಳಿಸಿದಾಗ ಮುಂಬೈ ತಂಡವು ಮತ್ತೆ ಹಿಡಿತ ಸಾಧಿಸುವ ಸಾಧ್ಯತೆ ಇತ್ತು. 

ಆದರೆ ಶ್ರೀಜಿತ್ ಜೊತೆಗೂಡಿದ ಪ್ರವೀಣ ಅವರು ಮುಂಬೈ ಕೈಯಿಂದ ಅವಕಾಶ ಕಸಿದುಕೊಂಡರು. ಇಬ್ಬರ ಬೀಸಾಟ ರಂಗೇರಿತು. ಒಂದು ಲಕ್ಷ ಪ್ರೇಕ್ಷಕರು ಸೇರಬಹುದಾದ ಕ್ರೀಡಾಂಗಣದ ಗ್ಯಾಲರಿಗಳು ಖಾಲಿ ಇದ್ದವು. ಖಾಲಿ ಕುರ್ಚಿಗಳ ಮೇಲೆ ಶ್ರೀಜಿತ್ ಮತ್ತು ದುಬೆ ಸಿಕ್ಸರ್‌ ಬಾರಿಸಿದಾಗೆಲೆಲ್ಲ ಚೆಂಡು ಪುಟಿದು ಮರಳಿದವು!

28 ವರ್ಷದ ಶ್ರೀಜಿತ್ ಅವರಿಗೆ ಇದು 3ನೇ ಲಿಸ್ಟ್ ಎ ಪಂದ್ಯ. ಬೆಂಗಳೂರಿನ ಎಡಗೈ ಬ್ಯಾಟರ್ ಈಚೆಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಪದಾರ್ಪಣೆ ಮಾಡಿ ಶತಕ ಗಳಿಸಿದ್ದರು.

ಟಿ20 ಟೂರ್ನಿಯಲ್ಲಿ ಅಜೇಯ ಅರ್ಧಶತಕ ಹೊಡೆದಿದ್ದರು. ದುಬೆ ಲೆಗ್‌ಬ್ರೇಕ್ ಬೌಲರ್ ಆಗಿದ್ದಾರೆ. ಸೀಮಿತ ಓವರ್‌ಗಳ ಮಾದರಿಗಳಲ್ಲಿ ಉತ್ತಮ ಬ್ಯಾಟರ್ ಆಗಿದ್ದಾರೆ.

ಅನ್ಮೋಲ್‌ಪ್ರೀತ್ ಶರವೇಗದ ಶತಕ

ಅಹಮದಾಬಾದ್: ಪಂಜಾಬ್ ತಂಡದ ಅನ್ಮೋಲ್‌ಪ್ರೀತ್ ಸಿಂಗ್ 35 ಎಸೆತಗಳಲ್ಲಿ ಶತಕ ಗಳಿಸಿದರು. ಅದರೊಂದಿಗೆ ಲಿಸ್ಟ್ ಎ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಹೊಡೆದ ದಾಖಲೆ ಬರೆದರು.

ಶನಿವಾರ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಅನ್ಮೋಲ್ ಆಟದ ಬಲದಿಂದ  ಪಂಜಾಬ್ ತಂಡವು 9 ವಿಕೆಟ್‌ಗಳಿಂದ ಅರುಣಾಚಲಪ್ರದೇಶ ವಿರುದ್ಧ ಜಯಿಸಿತು.

ಅನ್ಮೋಲ್‌ಪ್ರೀತ್ ಅವರನ್ನು ಈಚೆಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಂಡವೂ ಖರೀದಿಸಿರಲಿಲ್ಲ. ಆದರೆ ಇಲ್ಲಿ ಅವರು ಬರೋಡಾ ತಂಡದ  ಯೂಸುಫ್ ಪಠಾಣ್ ಅವರು 2009–10ರಲ್ಲಿ 40 ಎಸೆತದಲ್ಲಿ ಗಳಿಸಿದ್ದ ಶತಕದ ದಾಖಲೆಯನ್ನು ಮುರಿದರು. 

ಅಂತರರಾಷ್ಟ್ರೀಯ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಜೇಕ್ ಫ್ರೆಸರ್ ಮೆಕ್‌ಗುರ್ಕ್  ಅವರು ಸೌತ್ ಆಸ್ಟ್ರೇಲಿಯಾ ಪರವಾಗಿ 29 ಎಸೆತಗಲ್ಲಿ ಟಾಸ್ಮೇನಿಯಾ ವಿರುದ್ಧ ಶತಕ ಹೊಡೆದಿದ್ದರು. 2023–24ರಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಮೂರಂಕಿ ಮೊತ್ತ  ಗಳಿಸಿದ್ದರು. ಈ ಪಂದ್ಯದಲ್ಲಿ ಅರುಣಾಚಲ ತಂಡವು 165 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಪಂಜಾಬ್ ತಂಡವು ಅನ್ಮೋಲ್ ಪ್ರೀತ್ (115; 45ಎಸೆತ, 4X12, 6X9) ಅವರ ಅಬ್ಬರದ  ಆಟದಿಂದಾಗಿ 12.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಮಾಹಿತಿ: ಬಿಸಿಸಿಐ ಡಾಟ್ ಟಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.