
ಅಹಮದಾಬಾದ್: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿದೆ. ಮೊದಲ ಮೂರು ಪಂದ್ಯಗಳಲ್ಲಿಯೂ ಗೆದ್ದು ಭರ್ತಿ ಆತ್ಮವಿಶ್ವಾಸದಲ್ಲಿದೆ. ಇದರಿಂದಾಗಿ ನಾಕೌಟ್ ಹಂತ ತಲುಪುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಮಯಂಕ್ ಅಗರವಾಲ್ ನಾಯಕತ್ವದ ಬಳಗವು ಬುಧವಾರ ನಡೆಯುವ ಎಲೀಟ್ ಎ ಗುಂಪಿನ ಪಂದ್ಯದಲ್ಲಿ ಪುದುಚೇರಿಯನ್ನು ಎದುರಿಸಲಿದೆ. ಟೂರ್ನಿಯಲ್ಲಿ ಪುದುಚೇರಿ ತಂಡವು ಮೂರು ಸುತ್ತುಗಳಲ್ಲಿ ಆಡಿದ್ದರೂ ಗೆಲುವಿನ ಖಾತೆ ತೆರೆದಿಲ್ಲ. ಅನುಭವಿ ಆಟಗಾರರ ಕೊರತೆ ತಂಡವನ್ನು ಕಾಡುತ್ತಿದೆ. ಇದರಿಂದಾಗಿ ಮಯಂಕ್ ಬಳಗಕ್ಕೆ ಪುದುಚೇರಿ ತಂಡವು ಸುಲಭವಾಗಿ ಮಣಿಯುವ ನಿರೀಕ್ಷೆ ಇದೆ.
ಕರ್ನಾಟಕ ತಂಡವು ಕಳೆದ ಮೂರು ಪಂದ್ಯಗಳಲ್ಲಿ ಜಾರ್ಖಂಡ್, ಕೇರಳ ಹಾಗೂ ತಮಿಳುನಾಡು ತಂಡಗಳನ್ನು ಮಣಿಸಿದೆ. 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಷ್ಟೇ ಪಂದ್ಯಗಳನ್ನು ಗೆದ್ದಿರುವ ಮಧ್ಯಪ್ರದೇಶ ನಿವ್ವಳ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನದಲ್ಲಿದೆ.
ಟೂರ್ನಿಯಲ್ಲಿ ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಎರಡು ಹಾಗೂ ಕರುಣ್ ನಾಯರ್ ಒಂದು ಶತಕ ಗಳಿಸಿದ್ದಾರೆ. ಮಯಂಕ್ ಅವರು ಎರಡು ಅರ್ಧಶತಕ ಗಳಿಸಿದ್ದಾರೆ. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ದೇವದತ್ತ ಮತ್ತು ಕರುಣ್ ಅವರು ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಆದರೆ ಕೆಳಕ್ರಮಾಂಕದಲ್ಲಿ ಆಡುವ ಕೆ.ಎಲ್. ಶ್ರೀಜಿತ್ ಮತ್ತು ಆಲ್‌ರೌಂಡರ್ ಶ್ರೇಯಸ್ ಜೈಸ್ವಾಲ್ ಅವರು ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಭಿನವ್ ಮನೋಹರ್ ಕೂಡ ಉತ್ತಮ ಲಯದಲ್ಲಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಕಳೆದ ಪಂದ್ಯದಲ್ಲಿ 4 ವಿಕೆಟ್ ಗಳಿಸಿದ್ದರು. ವಿದ್ಯಾಧರ್ ಪಾಟೀಲ ಮತ್ತು ನವಪ್ರತಿಭೆ ಶ್ರೀಶಾ ಆಚಾರ್ ತಲಾ ಎರಡು ವಿಕೆಟ್ ಗಳಿಸಿದ್ದರು. ಅದರಿಂದಾಗಿ ಇವರ ಪರಿಣಾಮಕಾರಿ ದಾಳಿ ಎದುರಿಸುವ ಕಠಿಣ ಸವಾಲು ಪುದುಚೇರಿ ಬ್ಯಾಟರ್‌ಗಳಿಗೆ ಇದೆ.
ಪುದುಚೇರಿಯ ಯುವ ಬ್ಯಾಟರ್ ಜೆಶ್ವಂತ್ ಶ್ರೀರಾಮ್, ಅನುಭವಿ ಆಲ್‌ರೌಂಡರ್ ಜಯಂತ್ ಯಾದವ್ ಅವರು ಉತ್ತಮವಾಗಿ ಆಡಬಲ್ಲ ಸಮರ್ಥರು. ಆದರೆ ಕರ್ನಾಟಕದ ಬೌಲಿಂಗ್ ಪಡೆಯನ್ನು ಎದುರಿಸಬೇಕಾದ ಸವಾಲು ಇವರ ಮುಂದೆ ಇದೆ.
ಪಂದ್ಯ ಆರಂಭ: ಬೆಳಿಗ್ಗೆ 9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.