ADVERTISEMENT

Vijay Hazare: ಕರ್ನಾಟಕಕ್ಕೆ ತಮಿಳುನಾಡು ವಿರುದ್ಧ ಜಯ;ಮಿಂಚಿದ ಶ್ರೀಜಿತ್–ಶ್ರೇಯಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2025, 13:10 IST
Last Updated 29 ಡಿಸೆಂಬರ್ 2025, 13:10 IST
   

ಅಹಮದಾಬಾದ್: ವಿಕೆಟ್‌ ಕೀಪರ್ ಕೃಷ್ಣನ್ ಶ್ರೀಜಿತ್ ಮತ್ತು ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ತಮಿಳುನಾಡು ತಂಡದ ಮೇಲೆ ಸೋಮವಾರ 4 ವಿಕೆಟ್‌ಗಳ ಜಯಪಡೆಯಿತು. ಇದು ಎಲೀಟ್‌ ‘ಎ’ ಗುಂಪಿನಲ್ಲಿ ಕರ್ನಾಟಕಕ್ಕೆ ಸತತ ಮೂರನೇ ಜಯ.

ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದ ಸಾಂಪ್ರದಾಯಕ ಎದುರಾಳಿಗಳ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 49.5 ಓವರುಗಳಲ್ಲಿ 289 ರನ್‌ಗಳಿಗೆ ಆಲೌಟ್ ಆಯಿತು. ವೇಗದ ಬೌಲರ್ ಅಭಿಲಾಷ್‌ ಶೆಟ್ಟಿ 4 ವಿಕೆಟ್ ಪಡೆದರು. ಈ ಮೊದಲಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಕರ್ನಾಟಕ ಒಂದು ಹಂತದಲ್ಲಿ 136 ರನ್‌ಗಳಾಗುವಷ್ಟರಲ್ಲಿ ನಾಲ್ವರು ಅನುಭವಿ ಬ್ಯಾಟರ್‌ಗಳನ್ನು ಕಳೆದುಕೊಂಡಿತ್ತು.

ನಾಯಕ ಮಯಂಕ್ ಅಗರವಾಲ್ ಅರ್ಧ ಶತಕ (58, 77ಎ, 4x7) ಗಳಿಸಿ 27ನೇ ಓವರಿನಲ್ಲಿ ಮಧ್ಯಮ ವೇಗಿ ಸನ್ನಿ ಸಂಧು ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ಜಗದೀಶನ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದಾಗ ತಮಿಳುನಾಡು ಮೇಲುಗೈ ಸಾಧಿಸುವಂತೆ ಕಂಡಿತ್ತು. ಆದರೆ ಶ್ರೀಜಿತ್ (77, 78ಎ) ಮತ್ತು ಶ್ರೇಯಸ್ ಗೋಪಾಲ್ (55, 47ಎ) ಅವರು ಐದನೇ ವಿಕೆಟ್‌ಗೆ ಅಮೂಲ್ಯ 116 ರನ್ ಸೇರಿಸಿ ಕರ್ನಾಟಕದ ಮೇಲುಗೈಗೆ ಕಾರಣರಾದರು.

ADVERTISEMENT

ಇಬ್ಬರೂ ಒಂದೊಂದೇ ರನ್ ಗಳಿಸುತ್ತ, ಸಡಿಲ ಎಸೆತಗಳನ್ನು ದಂಡಿಸುತ್ತ ಇನಿಂಗ್ಸ್ ಕಟ್ಟಿದರು.

ಮೊತ್ತ 252 ಆಗಿದ್ದಾಗ ಇಬ್ಬರೂ ನಿರ್ಗಮಿಸಿದರೂ, ಡೇನಿಯಲ್ ಮನೋಹರ್ (ಅಜೇಯ 20) ಮತ್ತು ವಿದ್ಯಾಧರ ಪಾಟೀಲ (ಔಟಾಗದೇ 17) ತಂಡವನ್ನು ಗುರಿ ತಲುಪಿಸಿದರು. ಕರ್ನಾಟಕ 17 ಎಸೆತಗಳು ಇರುವಂತೆ 6 ವಿಕೆಟ್‌ಗೆ 293 ರನ್ ಹೊಡೆಯಿತು.

ಇದಕ್ಕೆ ಮೊದಲು ನಾಯಕ–ವಿಕೆಟ್‌ ಕೀಪರ್ ನಾರಾಯಣ್ ಜಗದೀಶನ್ (65) ಮತ್ತು ಮೂರನೇ ಕ್ರಮಾಂಕದ ಆಟಗಾರ ಪ್ರದೋಶ್ ರಂಜನ್ ಪಾಲ್ (57) ಅವರು ಅರ್ಧ ಶತಕಗಳನ್ನು ಬಾರಿಸಿ ತಮಿಳುನಾಡು ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು.

ಕರ್ನಾಟಕ ಕಡೆ ಅಭಿಲಾಷ್ ಮತ್ತೊಮ್ಮೆ ಪರಿಣಾಮಕಾರಿ ಎನಿಸಿ ನಾಲ್ಕು ವಿಕೆಟ್ ಪಡೆದರು. ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ (47ಕ್ಕೆ1) ಮತ್ತು ಎಡಗೈ ಸ್ಪಿನ್ನರ್ ಶ್ರೀಶ ಆಚಾರ್ (47ಕ್ಕೆ2) ಅವರೂ ಹೆಚ್ಚು ರನ್ ಕೊಡಲಿಲ್ಲ.

ತಂಡಕ್ಕೆ ಹಿಂತಿರುಗಿದ ಪ್ರಮುಖ ವೇಗಿ ಪ್ರಸಿದ್ಧ ಕೃಷ್ಣ ಯಶಸ್ಸು ಗಳಿಸಲಿಲ್ಲ.

ದೆಹಲಿ ತಂಡಕ್ಕೆ ಹ್ಯಾಟ್ರಿಕ್‌ ಗೆಲುವು

ಬೆಂಗಳೂರು: ರಿಷಭ್‌ ಪಂತ್‌ ನಾಯಕತ್ವದ ದೆಹಲಿ ತಂಡವು ಸೋಮವಾರ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಸೌರಾಷ್ಟ್ರ ತಂಡವನ್ನು ಮಣಿಸಿತು.

ಮೊದಲೆರಡು ಪಂದ್ಯಗಳಲ್ಲಿ ಮಿಂಚಿದ್ದ ವಿರಾಟ್‌ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ದೆಹಲಿ ತಂಡವು ಸತತ ಮೂರನೇ ಜಯ ದಾಖಲಿಸಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ (2) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದೆಹಲಿ ತಂಡವು ವಿಶ್ವರಾಜಸಿಂಹ ಜಡೇಜ (115) ಅವರ ಶತಕದ ಬಲದಿಂದ 7 ವಿಕೆಟ್‌ಗೆ 320 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ನವದೀಪ್‌ ಸೈನಿ ಮೂರು ವಿಕೆಟ್‌ ಪಡೆದರು. ಗುರಿ ಬೆನ್ನಟ್ಟಿದ ದೆಹಲಿ ತಂಡವು ಏಳು ಎಸೆತಗಳು ಬಾಕಿ ಇರುವಂತೆ 7 ವಿಕೆಟ್‌ಗೆ 321 ರನ್‌ ಗಳಿಸಿ ಸಂಭ್ರಮಿಸಿತು. ಪ್ರಿಯಾಂಶ್‌ ಆರ್ಯ (78) ಮತ್ತು ತೇಜಸ್ವಿ (53) ಅವರು ಅರ್ಧಶತಕಗಳ ಕಾಣಿಕೆ ನೀಡಿದರು.

ಆಲೂರು ಕ್ರೀಡಾಂಗಣ 2: ಸೌರಾಷ್ಟ್ರ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 320 (ವಿಶ್ವರಾಜಸಿಂಹ ಜಡೇಜ 115, ಗುಜ್ಜರ್‌ ಸಮ್ಮರ್‌ 41, ರುಚಿತ್ ಅಹಿರ್ ಔಟಾಗದೇ 65; ನವದೀಪ್‌ ಸೈನಿ 41ಕ್ಕೆ 3). ದೆಹಲಿ: 48.5 ಓವರ್‌ಗಳಲ್ಲಿ 7 ವಿಕೆಟ್‌ಗೆ 321 (ಪ್ರಿಯಾಂಶ್‌ ಆರ್ಯ 78, ತೇಜಸ್ವಿ 53, ಹರ್ಷ್‌ ತ್ಯಾಗಿ 49, ನವದೀಪ್‌ ಸೈನಿ ಔಟಾಗದೇ 34). ಫಲಿತಾಂಶ: ದೆಹಲಿ ತಂಡಕ್ಕೆ ಮೂರು ವಿಕೆಟ್‌ಗಳ ಜಯ.

ಆಲೂರು ಕ್ರೀಡಾಂಗಣ 3: ರೈಲ್ವೇಸ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 365 (ಪ್ರಥಮ್‌ ಸಿಂಗ್‌ 73, ರವಿ ಸಿಂಗ್‌ 88, ಅಶುತೋಷ್‌ ಶರ್ಮಾ 50, ಝಡ್‌.ಎ. ಝಾನ್‌ ಔಟಾಗದೇ 48; ಪುಲ್ಕಿತ್‌ ನಾರಂಗ್ 43ಕ್ಕೆ 3). ಸರ್ವಿಸಸ್‌: 47.2 ಓವರ್‌ಗಳಲ್ಲಿ 281 (ಸಾಗರ್‌ ದಹಿಯಾ 95, ರವಿ ಚವಾನ್‌ 73; ಆರ್‌.ಕೆ.ಚೌಧರಿ 27ಕ್ಕೆ 3). ಫಲಿತಾಂಶ: ರೈಲ್ವೇಸ್‌ ತಂಡಕ್ಕೆ 84 ರನ್‌ಗಳ ಗೆಲುವು.

ಆಲೂರು ಕ್ರೀಡಾಂಗಣ: ಆಂಧ್ರ: 49.2 ಓವರ್‌ಗಳಲ್ಲಿ 221 (ಎಸ್‌.ಎನ್‌.ಡಿ.ವಿ ಪ್ರಸಾದ್ 66, ಸೌರಭ್‌ ಕುಮಾರ್‌ 47; ಬಿಪ್ಲಬ್ ಸಮಂತರಾಯ್ 36ಕ್ಕೆ 3, ಗೋವಿಂದ ಪೋದ್ದಾರ್ 36ಕ್ಕೆ 3). ಒಡಿಶಾ: 43.4 ಓವರ್‌ಗಳಲ್ಲಿ 4 ವಿಕೆಟ್‌ಗೆ 223 (ಓಂ ಟಿ.ಮುಂಢೆ 91, ಗೋವಿಂದ ಪೋದ್ದಾರ್‌ 89; ಸತ್ಯನಾರಾಯಣ ರಾಜು 49ಕ್ಕೆ 2). ಫಲಿತಾಂಶ: ಒಡಿಶಾ ತಂಡಕ್ಕೆ 6 ವಿಕೆಟ್‌ಗಳ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.