ADVERTISEMENT

ವಿಜಯ್ ಹಜಾರೆ ಟ್ರೋಫಿ | ದೇವದತ್ತ ಮೇಲೆ ಭರವಸೆ: ಕರ್ನಾಟಕಕ್ಕೆ ಫೈನಲ್ ಆಸೆ

ಗಿರೀಶದೊಡ್ಡಮನಿ
Published 15 ಜನವರಿ 2026, 0:21 IST
Last Updated 15 ಜನವರಿ 2026, 0:21 IST
<div class="paragraphs"><p>ದೇವದತ್ತ ಪಡಿಕ್ಕಲ್&nbsp;</p></div>

ದೇವದತ್ತ ಪಡಿಕ್ಕಲ್ 

   

ಬೆಂಗಳೂರು: ಒಂದು ವರ್ಷದ ಹಿಂದೆ ವಡೋದರಾದಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ವಿದರ್ಭ ತಂಡದಲ್ಲಿ ಆಡಿದ್ದ ಕರುಣ್ ನಾಯರ್ ಕರ್ನಾಟಕದ ಬೌಲರ್‌ಗಳನ್ನು ಎದುರಿಸಿದ್ದರು. ಈಗ ಅದೇ ಕರುಣ್, ಗುರುವಾರ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ಬೌಲರ್‌ಗಳ ಎದುರು ಬ್ಯಾಟ್‌ ಬೀಸಲು ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ; ದೇವದತ್ತ ಪಡಿಕ್ಕಲ್ ಅವರನ್ನೂ ಕಟ್ಟಿಹಾಕುವ ಸವಾಲು ಎದುರಾಳಿ ಬಳಗಕ್ಕಿದೆ.  

ಆ  ಫೈನಲ್‌ನಲ್ಲಿ ಕರ್ನಾಟಕ ಜಯಿಸಿತ್ತು. ಈಗ ಪ್ರಶಸ್ತಿ ಉಳಿಸಿಕೊಳ್ಳುವತ್ತ ಮಯಂಕ್ ಅಗರವಾಲ್ ಬಳಗ ಚಿತ್ತ ನೆಟ್ಟಿದೆ. ಆದರೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ವಿದರ್ಭ ತಂಡವಿದೆ. ಆ ಟೂರ್ನಿಯಲ್ಲಿಯೂ ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು 600ಕ್ಕೂ ಹೆಚ್ಚು ರನ್‌ಗಳನ್ನು ಪೇರಿಸಿದ್ದರು. ಈ ಸಲವಂತೂ ಎಂಟು ಪಂದ್ಯಗಳಿಂದ 721 ರನ್‌ಗಳನ್ನು ಕಲೆಹಾಕಿದ್ದಾರೆ. ಅದರಲ್ಲಿ ನಾಲ್ಕು ಶತಕಗಳೂ ಇವೆ. ಭಾರತ ತಂಡದಲ್ಲಿ ಆಡುವ ಅವಕಾಶ ಸಿಗದಿದ್ದರೂ ಎದೆಗುಂದದ ದೇವದತ್ತ ಇಲ್ಲಿ ಆರಂಭಿಕ ಬ್ಯಾಟರ್ ಆಗಿ ಅಮೋಘವಾಗಿ ಆಡುತ್ತಿದ್ದಾರೆ. ನಾಯಕ ಮಯಂಕ್ ಅವರೊಂದಿಗೆ ಹಲವು ಪಂದ್ಯಗಳಲ್ಲಿ ಉತ್ತಮ ಆರಂಭ ನೀಡಿದ್ದಾರೆ.  ಮಯಂಕ್ ಅವರೂ ಎರಡು ಶತಕಗಳೊಂದಿಗೆ ಒಟ್ಟು 411 ರನ್‌ ಗಳಿಸಿದ್ದಾರೆ.

ADVERTISEMENT

ಇನ್ನು ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ಕರುಣ್ ನಾಯರ್ (330 ರನ್) , ಸ್ಮರಣ್ ರವಿಚಂದ್ರನ್ (171 ರನ್), ಕೆ.ಎಲ್. ಶ್ರೀಜಿತ್, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಹಾಗೂ ಅಭಿನವ್ ಮನೋಹರ್  ಅವರು ಉತ್ತಮ ಲಯದಲ್ಲಿದ್ದಾರೆ. ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ ಪ್ರವೇಶಿಸಿದ್ದ ಕರ್ನಾಟಕವು ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ಎದುರು ಜಯಸಾಧಿಸಿತ್ತು. ಆ ಪಂದ್ಯದಲ್ಲಿಯೂ ಅಗ್ರ ಮೂರು ಬ್ಯಾಟರ್‌ಗಳೇ ಮಿಂಚಿದ್ದರು. ವಿದ್ಯಾಧರ್ ಪಾಟೀಲ ಪರಿಣಾಮಕಾರಿ ದಾಳಿ ನಡೆಸಿದ್ದರು. ಅವರಿಗೆ ವಿದ್ವತ್ ಕಾವೇರಪ್ಪ ಮತ್ತು ಎಡಗೈ ವೇಗಿ ಅಭಿಲಾಷ್ ಶೆಟ್ಟಿ  ಉತ್ತಮ ಜೊತೆ ನೀಡಿದ್ದರು. ಈ ಪಂದ್ಯದಲ್ಲಿ ಒಟ್ಟು ನಾಲ್ವರು ವೇಗಿಗಳು ಆಡಿದ್ದರು. 

ಆದರೆ ನಾಲ್ಕರ ಘಟ್ಟದ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿದೆ. ಮುಸ್ಸಂಜೆಯ ಹೊತ್ತಿನಲ್ಲಿ ಇಬ್ಬನಿ ಬೀಳುವ ಸಾಧ್ಯತೆಗಳು ಇವೆ. ಆದ್ದರಿಂದ ಒಬ್ಬ ಹೆಚ್ಚುವರಿ ಸ್ಪಿನ್ನರ್ ಆಗಿ ಶ್ರೀಶಾ ಆಚಾರ್ ಕಣಕ್ಕಿಳಿಯಬಹುದು. ವಿದರ್ಭ ತಂಡವೂ ಸಮತೋಲನ ಕಾಯ್ದುಕೊಂಡಿದೆ. ಪಡಿಕ್ಕಲ್ ನಂತರ ಅತ್ಯಧಿಕ ರನ್‌ ಗಳಿಸಿರುವ ಬ್ಯಾಟರ್ ಅಮನ್ ಮೊಖಡೆ (643), ಧ್ರುವ ಶೋರೆ (468 ) ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ದೆಹಲಿ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಮಿಂಚಿದ್ದರು. ಆರಂಭಿಕ ಬ್ಯಾಟರ್ ಅಥರ್ವ ತೈಡೆ (262) ಉತ್ತಮ ಲಯದಲ್ಲಿದ್ದಾರೆ. 

ಟೂರ್ನಿಯ ಇತಿಹಾಸದಲ್ಲಿ ಕರ್ನಾಟಕವು ವಿದರ್ಭ ತಂಡವನ್ನು ಎದುರಿಸಿದ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಜಯಿಸಿದೆ. ಆದ್ದರಿಂದ ಗೆಲುವಿನ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. 

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.