ದೇವದತ್ ಪಡ್ಡಿಕಲ್
ಕರ್ನಾಟಕಕ್ಕೆ ಗರಿಗೆದರಿದ ಐದನೇ ಪ್ರಶಸ್ತಿಯದ ಕನಸು | ಪ್ರಸಿದ್ಧ ಕೃಷ್ಣ, ಶ್ರೇಯಸ್ ಗೋಪಾಲ್‌ಗೆ ತಲಾ 2 ವಿಕೆಟ್ | ಜ.18ರಂದು ನಡೆಯಲಿರುವ ಫೈನಲ್
ವಡೋದರಾ: ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಮತ್ತು ನವಪ್ರತಿಭೆ ಸ್ಮರಣ್ ರವಿಚಂದ್ರನ್ ಅವರ ಅಮೋಘ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು. ಇದರೊಂದಿಗೆ ತಂಡಕ್ಕೆ ಐದನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಗರಿಗೆದರಿದೆ.
ಬುಧವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು 6 ವಿಕೆಟ್‌ಗಳಿಂದ ಹೋದ ಸಲದ ಚಾಂಪಿಯನ್ ಹರಿಯಾಣ ತಂಡವನ್ನು ಮಣಿಸಿತು.
ಕರ್ನಾಟಕ ತಂಡವು 238 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿತು. ಆದರೆ ಅನ್ಷುಲ್ ಕಾಂಭೋಜ್ ಹಾಕಿದ ಮೊದಲ ಓವರ್‌ನಲ್ಲಿಯೇ ಕರ್ನಾಟಕ ತಂಡದ ನಾಯಕ ಮಯಂಕ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ಟೂರ್ನಿಯಲ್ಲಿ 4 ಶತಕಗಳ ಸಹಿತ 619 ರನ್ ಸೇರಿಸಿರುವ ಮಯಂಕ್ ಇಲ್ಲಿ ಖಾತೆ ತೆರೆಯದೇ ಮರಳಿದರು.
ಆದರೆ ಕ್ರೀಸ್‌ನಲ್ಲಿದ್ದ ಇನ್ನೊಬ್ಬ ಆರಂಭಿಕ ಬ್ಯಾಟರ್ ದೇವದತ್ತ ಶಾಂತಚಿತ್ತದಿಂದ ಆಟ ಮುಂದುವರಿಸಿದರು. ದೇವದತ್ತ (86; 113ಎ, 4X8, 6X1) ಮತ್ತು ಕೆ.ವಿ. ಅನೀಶ್ (22; 47ಎ, 4X1, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು. 16ನೇ ಓವರ್‌ನಲ್ಲಿ ಬೌಲರ್ ಅಮಿತ್ ರಾಣಾ ಅವರು ಅನೀಶ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಆದರೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ದೇವದತ್ತ ಅವರೊಂದಿಗೆ ಸೇರಿದ ಸ್ಮರಣ್ (76; 94ಎ,4X3, 6X3) ತಂಡದ ಆತಂಕವನ್ನು ದೂರಗೊಳಿಸಿದರು. 3ನೇ ವಿಕೆಟ್ ಜೊತೆಯಾಟದಲ್ಲಿ 128 ರನ್ ಸೇರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು.
ಈ ಹಂತದಲ್ಲಿ ದೇವದತ್ತ ಪಡಿಕ್ಕಲ್ ಅವರ ವಿಕೆಟ್ ಗಳಿಸಿದ ಸ್ಪಿನ್ನರ್ ನಿಶಾಂತ್ ಸಿಂಧು ಜೊತೆಯಾಟ ಮುರಿದರು. ಕ್ರೀಸ್‌ಗೆ ಬಂದ ಕೆ.ಎಲ್. ಶ್ರೀಜಿತ್ (3 ರನ್) ಅವರನ್ನು ಪಾರ್ಥ್ ವತ್ಸ ಅವರು ಪೆವಿಲಿಯನ್‌ಗೆ ಕಳಿಸಿದರು.
ಈ ಹಂತದಲ್ಲಿ ಹರಿಯಾಣ ತಿರುಗೇಟು ನೀಡುವ ಉತ್ಸಾಹದಲ್ಲಿತ್ತು. ಆದರೆ ಸ್ಮರಣ್ ಮತ್ತು ಶ್ರೇಯಸ್ ಗೋಪಾಲ್ (ಔಟಾಗದೆ 23; 20ಎ) ಅದಕ್ಕೆ ಆಸ್ಪದ ಕೊಡಲಿಲ್ಲ. 5ನೇ ವಿಕೆಟ್ ಜೊತೆಯಾಟದಲ್ಲಿ 26 ರನ್ ಸೇರಿಸಿದರು. ಇದರಿಂದಾಗಿ ಗೆಲುವು ಕೈಗೂಡಿತು.
ಅಭಿಲಾಷ್ ಶೆಟ್ಟಿ ಮಿಂಚು: ಕೋತಂಬಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಎಡಗೈ ವೇಗಿ ಅಭಿಲಾಷ್ ಶೆಟ್ಟಿ (34ಕ್ಕೆ4) ಅವರ ದಾಳಿಯ ಮುಂದೆ ಹರಿಯಾಣದ ಪ್ರಮುಖ ಬ್ಯಾಟರ್‌ಗಳು ಶರಣಾದರು. ಅನುಭವಿ ಪ್ರಸಿದ್ಧ ಕೃಷ್ಣ, ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಮತ್ತು ಹಾರ್ದಿಕ್ ರಾಜ್ 1 ವಿಕೆಟ್ ಗಳಿಸಿದರು.
ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ಲಿ ವಿದರ್ಭ ಮತ್ತು ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಗೆದ್ದ ತಂಡವು 18ರಂದು ನಡೆಯುವ ಫೈನಲ್‌ನಲ್ಲಿ ಕರ್ನಾಟಕವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು:
ಹರಿಯಾಣ: 50 ಓವರ್‌ಗಳಲ್ಲಿ 9ಕ್ಕೆ237 (ಹಿಮಾಂಶು ರಾಣಾ 44, ಅಂಕಿತ್ ಕುಮಾರ್ 48, ದಿನೇಶ್ ಬಾನಾ 20, ರಾಹುಲ್ ತೆವಾಟಿಯಾ 21, ಅನುಜ್ ಠಕ್ರಾಲ್ 23, ಪ್ರಸಿದ್ಧ ಕೃಷ್ಣ 40ಕ್ಕೆ2, ಅಭಿಲಾಷ್ ಶೆಟ್ಟಿ 34ಕ್ಕೆ4)
ಕರ್ನಾಟಕ: 47.2 ಓವರ್‌ಗಳಲ್ಲಿ 5ಕ್ಕೆ238 (ದೇವದತ್ತ ಪಡಿಕ್ಕಲ್ 86, ಕೆ.ವಿ. ಅನೀಶ್ 22, ಸ್ಮರಣ್ ರವಿಚಂದ್ರನ್ 76, ಶ್ರೇಯಸ್ ಗೋಪಾಲ್ ಔಟಾಗದೆ 23, ನಿಶಾಂತ್ ಸಿಂಧು 47ಕ್ಕೆ2) ಫಲಿತಾಂಶ: ಕರ್ನಾಟಕ ತಂಡಕ್ಕೆ 5 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.