ADVERTISEMENT

ವಿಜಯ್ ಮರ್ಚಂಟ್ ಟ್ರೋಫಿ: ಕರ್ನಾಟಕದ ಅಥರ್ವಗೆ 5 ವಿಕೆಟ್‌ ಗೊಂಚಲು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
<div class="paragraphs"><p>ಅಥರ್ವ ಎಸ್‌. ದೇಶಪಾಂಡೆ</p></div>

ಅಥರ್ವ ಎಸ್‌. ದೇಶಪಾಂಡೆ

   

ಬೆಂಗಳೂರು: ಬಲಗೈ ಸ್ಪಿನ್ನರ್‌ ಅಥರ್ವ ಎಸ್‌. ದೇಶಪಾಂಡೆ ಅವರ 5 ವಿಕೆಟ್‌ ಗೊಂಚಲಿನ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬರೋಡಾ ತಂಡವನ್ನು 177 ರನ್‌ಗಳಿಗೆ ಕಟ್ಟಿಹಾಕಿತು. ಅದರೊಂದಿಗೆ, ಮೊದಲ ಇನಿಂಗ್ಸ್‌ನಲ್ಲಿ 57 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು.

ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 9 ವಿಕೆಟ್‌ಗೆ 225 ರನ್‌ಗಳೊಂದಿಗೆ ಆಟ ಮುಂದುವರಿಸಿದ ರಾಜ್ಯ ತಂಡವು ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡಿತು. ಬಳಿಕ, ಇನಿಂಗ್ಸ್‌ ಆರಂಭಿಸಿದ ಬರೋಡಾ ತಂಡವು ಅಥರ್ವ (45ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಎದುರು 73 ಓವರ್‌ಗಳಲ್ಲಿ ಆಲೌಟ್‌ ಆಯಿತು. ನಾಯಕ ಆರೂಷ್‌ ಜೈನ್‌ (25ಕ್ಕೆ2) ಹಾಗೂ ಸುವಿಕ್‌ ಗಿಲ್‌ (22ಕ್ಕೆ2) ತಲಾ ಎರಡು ವಿಕೆಟ್‌ ಕಿತ್ತರು.

ADVERTISEMENT

ಬರೋಡಾ ತಂಡದ ಪರ ನಾಯಕ ತಿಲಕ್‌ ಪಟೇಲ್‌ (57; 113ಎ, 4x3, 6x1) ಹೊರತುಪಡಿಸಿ, ಉಳಿದ್ಯಾವ ಬ್ಯಾಟರ್‌ಗಳೂ ಪ್ರತಿರೋಧ ತೋರಲಿಲ್ಲ.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಕರ್ನಾಟಕ ತಂಡವು ದಿನದಾಟದ ಅಂತ್ಯಕ್ಕೆ 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 6 ರನ್‌ ಗಳಿಸಿದೆ. ಕೊನೆಯ ದಿನದಾಟ ಬಾಕಿ ಉಳಿದಿದ್ದು, ಕುತೂಹಲ ಕೆರಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಕರ್ನಾಟಕ: 91.3 ಓವರ್‌ಗಳಲ್ಲಿ 234 (ಸಮರ್ಥ್‌ ಎಂ. ಕುಲಕರ್ಣಿ ಔಟಾಗದೇ 19, ಪ್ರಣವ್‌ ಕೆ. 36ಕ್ಕೆ3). ಬರೋಡಾ: 73 ಓವರ್‌ಗಳಲ್ಲಿ 177 (ತಿಲಕ್‌ ಪಟೇಲ್‌ 57; ಅಥರ್ವ ಎಸ್‌. ದೇಶಪಾಂಡೆ 45ಕ್ಕೆ5, ಆರೂಷ್‌ ಜೈನ್‌ 25ಕ್ಕೆ2, ಸುವಿಕ್‌ ಗಿಲ್‌ 22ಕ್ಕೆ2). ಎರಡನೇ ಇನಿಂಗ್ಸ್: ಕರ್ನಾಟಕ: 5 ಓವರ್‌ಗಳಲ್ಲಿ 1 ವಿಕೆಟ್‌ಗೆ 6 (ಪ್ರಣವ್‌ ಕೆ. 5ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.