ADVERTISEMENT

ವೀರಾವೇಶದಿಂದ ಹೋರಾಡುವ ವಿರಾಟ್ ಕೊಹ್ಲಿಯೇ ಹೋರಾಟ ಸುಲಭವಲ್ಲ ಎಂದದ್ದೇಕೆ?

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 11:29 IST
Last Updated 28 ಮಾರ್ಚ್ 2020, 11:29 IST
   

ನವದೆಹಲಿ: ಕ್ರಿಕೆಟ್‌ ಮೈದಾನದಲ್ಲಿ ಎದುರಾಳಿ ತಂಡಗಳ ವಿರುದ್ಧ ಕೊನೆವರೆಗೂ ಸೋಲೊಪ್ಪಿಕೊಳ್ಳದೆ ವೀರಾವೇಶದಿಂದ ಹೋರಾಡುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಇದೀಗ ‘ಹೋರಾಟ ಅಷ್ಟು ಸುಲಭವಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಹೌದು ಕೊಹ್ಲಿ ಎಚ್ಚರಿಕೆ ನೀಡಿರುವುದು ಕೋವಿಡ್‌–19 ಸೋಂಕು ವಿರುದ್ಧದ ಹೋರಾಟದ ಬಗ್ಗೆ.

ಸೋಂಕು ಹರಡದಂತೆ ತಡೆಯುವ ಸಲುವಾಗಿ 21 ದಿನಗಳ ಕಾಲ ಲಾಕ್‌ಡೌನ್‌ ಆದೇಶ ಜಾರಿಯಲ್ಲಿದೆ. ಹೀಗಿದ್ದರೂ ನಿಯಮವನ್ನು ಲೆಕ್ಕಿಸದೆ ಜನರು ಓಡಾಡುತ್ತಿರುವುದು ದೇಶದಾದ್ಯಂತ ವರದಿಯಾಗುತ್ತಿವೆ.ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ವಿರಾಟ್‌, ‘ಪರಿಸ್ಥಿತಿಯ ಗಂಭೀರತೆ ಮತ್ತು ವಾಸ್ತವದ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳಿ. ಜವಾಬ್ದಾರಿವಹಿಸಿ. ದೇಶಕ್ಕೆ ನಮ್ಮ ಬೆಂಬಲ ಬೇಕಾಗಿದೆ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲಿ, ‘ಹೆಲೊ ನಾನು ವಿರಾಟ್ ಕೊಹ್ಲಿ. ಭಾರತದ ಕ್ರೀಡಾಪಟುವಾಗಿ ನಿಮ್ಮೊಂದಿಗೆ ಮಾತನಾಡುತ್ತಿಲ್ಲ ಭಾರತದ ನಾಗರಿಕನಾಗಿ ಹೇಳುತ್ತಿದ್ದೇನೆ. ಕರ್ಫ್ಯೂ ನಿಯಮಗಳು, ಲಾಕ್‌ಡೌನ್‌ ಆದೇಶವನ್ನು ಪರಿಗಣಿಸದೆ ಕಳೆದ ಕೆಲವು ದಿನಗಳಿಂದ ಜನರು ಗುಂಪುಗುಂಪಾಗಿ ಸಂಚರಿಸುವುದನ್ನು ನೋಡಿದರೆ, ಕೋವಿಡ್ ವಿರುದ್ಧದ ಹೋರಾಟವನ್ನು ತುಂಬಾ ಹಗುರವಾಗಿ ತೆಗೆದುಕೊಂಡಿರುವುದು ಗೊತ್ತಾಗುತ್ತದೆ. ಆದರೆ, ಈ ಹೋರಾಟವು ನಾವು ಅಂದುಕೊಂಡಷ್ಟು ಸುಲಭವಾದುದ್ದಲ್ಲ‘ ಎಂದು ಹೇಳಿದ್ದಾರೆ.

ADVERTISEMENT

ಮುಂದುವರಿದು, ‘ದಯವಿಟ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿರಿ ಎಂದುನಾನು ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಾಗಿದೆ. ನಿಮ್ಮ ಬೇಜಾವಾಬ್ದಾರಿಯಿಂದ ನಿಮ್ಮ ಕುಟುಂಬದ ಯಾರಿಗಾದರೂ ಸೋಂಕು ತಗುಲಿದರೆ ಪರಿಸ್ಥಿತಿ ಏನು ಎಂಬುದನ್ನು ಒಮ್ಮೆ ಆಲೋಚಿಸಿ’ ಎಂದು ಕಿವಿಮಾತು ಹೇಳಿದ್ದಾರೆ.

‘ಇದಕ್ಕಾಗಿ ಕಷ್ಟಪಟ್ಟು ಶ್ರಮಿಸುತ್ತಿರುವ ತಜ್ಞರ ಸಲಹೆಗಳನ್ನು ಅನುಸರಿಸಿ. ನಿಯಮಗಳನ್ನು ಮುರಿದು ಗುಂಪುಗೂಡಿ ಅಡ್ಡಾಡುವುದರ ಬದಲು ನಮ್ಮ ಕರ್ತವ್ಯವನ್ನು ಪಾಲಿಸಿದರೆ ಮಾತ್ರವೇ ಈ ಹೋರಾಟ ಯಶಸ್ವಿಯಾಗಲು ಸಾಧ್ಯ. ಇದು ದೇಶದ ಏಳಿಗೆಗಾಗಿ ನನ್ನ ಕ್ರಮವಾಗಿದೆ. ಇದೀಗ ನಿಮ್ಮೆಲ್ಲರೊಂದಿಗೆ ಪರಿಸ್ಥಿತಿ ಸುಧಾರಿಸುವುದನ್ನು ಕಾಣಲು ಬಯಸುತ್ತೇನೆ. ದಯವಿಟ್ಟು ಸರ್ಕಾರದ ನಿಯಮಗಳನ್ನು ಪಾಲಿಸಿ. ಜೈ ಹಿಂದ್’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.