ADVERTISEMENT

IND vs NZ: 10ನೇ ಸಲ ಶೂನ್ಯಕ್ಕೆ ಔಟಾದ ನಾಯಕ ಕೊಹ್ಲಿ: ಅಂಪೈರ್ ತೀರ್ಪಿಗೆ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2021, 15:15 IST
Last Updated 3 ಡಿಸೆಂಬರ್ 2021, 15:15 IST
ಔಟಾಗಿ ನಿರ್ಗಮಿಸುತ್ತಿರುವ ವಿರಾಟ್ ಕೊಹ್ಲಿ (ಎಎಫ್‌ಪಿ ಚಿತ್ರ)
ಔಟಾಗಿ ನಿರ್ಗಮಿಸುತ್ತಿರುವ ವಿರಾಟ್ ಕೊಹ್ಲಿ (ಎಎಫ್‌ಪಿ ಚಿತ್ರ)   

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದರೊಂದಿಗೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಹತ್ತನೇ ಬಾರಿ ಸೊನ್ನೆ ಸುತ್ತಿದರು. ಆದರೆ, ವಿರಾಟ್ 'ಔಟ್' ತೀರ್ಪಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದ್ದು, ಕೆಲವರು ಟೀಂ ಇಂಡಿಯಾದ ನಾಯಕ ಔಟಾಗಿರಲಿಲ್ಲ ಎಂದು ವಾದಿಸಿದ್ದಾರೆ.

ಮಳೆಯಿಂದಾಗಿ ಶುಕ್ರವಾರ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡಕ್ಕೆ ಶುಭಮನ್ ಗಿಲ್ ಮತ್ತು ಮಯಂಕ್ ಅಗರವಾಲ್ ಉತ್ತಮ ಆರಂಭವೊದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 80 ರನ್‌ಗಳ ಬುನಾದಿ ಹಾಕಿಕೊಟ್ಟಿತು.

ಈ ಹಂತದಲ್ಲಿಭಾರತ ಮೂಲದವರೇ ಆದ ಎಜಾಜ್ ಪಟೇಲ್ ಟೀಂ ಇಂಡಿಯಾಗೆ ಆಘಾತ ನೀಡಿದರು. 44 ರನ್ ಗಳಿಸಿದ್ದ ಗಿಲ್‌, ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ (0) ಮತ್ತು ವಿರಾಟ್ ಅವರನ್ನು ಬೆನ್ನುಬೆನ್ನಿಗೆ ಪೆವಿಲಿಯನ್‌ಗೆ ಅಟ್ಟುವ ಮೂಲಕ ತಮ್ಮ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ADVERTISEMENT
ವಿಕೆಟ್‌ ಪಡೆದ ಸಂಭ್ರಮದಲ್ಲಿ ಎಜಾಜ್ ಪಟೇಲ್(ಎಎಫ್‌ಪಿ ಚಿತ್ರ)

ಗಿಲ್, ರಾಸ್ ಟೇಲರ್‌ಗೆ ಕ್ಯಾಚಿತ್ತರೆ, ಪೂಜಾರ ಕ್ಲೀನ್‌ ಬೌಲ್ಡ್ ಆದರು. ಕೊಹ್ಲಿ ಎಲ್‌ಬಿ ಬಲೆಗೆ ಬಿದ್ದರು.ಬಳಿಕ ಬಂದ ಶ್ರೇಯಸ್ ಅಯ್ಯರ್ (18) ಜೊತೆಗೂಡಿ ಮಯಂಕ್ ನಾಲ್ಕನೇ ವಿಕೆಟ್‌ಗೆ 80 ರನ್ ಕೂಡಿಸಿದರು. ಸದ್ಯ ಮೊದಲ ದಿನದಾಟ ಮುಕ್ತಾಯವಾಗಿದ್ದು ತಂಡದ ಮೊತ್ತ ನಾಲ್ಕು ವಿಕೆಟ್‌ಗೆ 221 ರನ್ ಆಗಿದೆ. ಮಯಂಕ್ ಶತಕ (120 ರನ್‌) ಬಾರಿಸಿ ಬ್ಯಾಟಿಂಗ್‌ ಮುಂದುವರಿಸಿದ್ದು, ಅವರೊಂದಿಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ (25) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ನಾಲ್ಕೂ ವಿಕೆಟ್‌ಗಳು ಎಜಾಜ್‌ ಪಾಲಾದದ್ದು ವಿಶೇಷ. ಇದಕ್ಕಾಗಿ ಅವರು29 ಓವರ್ ಬೌಲ್ ಮಾಡಿ 73 ರನ್ ಬಿಟ್ಟುಕೊಟ್ಟರು.

ಕ್ಯಾಲೆಂಡರ್ ವರ್ಷದಲ್ಲಿ 4ನೇ ಸಲ ಸೊನ್ನೆ ಸುತ್ತಿದ ಕೊಹ್ಲಿ
ವಿರಾಟ್ ಕೊಹ್ಲಿ ಈ ವರ್ಷ (2021) ಒಟ್ಟು ನಾಲ್ಕು ಬಾರಿ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದ್ದಾರೆ. ಆ ಮೂಲಕಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತದ ನಾಯಕರ ಪೈಕಿ ಬಿಷನ್‌ ಬೇಡಿ, ಕಪಿಲ್‌ ದೇವ್, ಎಂ.ಎಸ್‌. ಧೋನಿ ಅವರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

ಬೇಡಿ1976ರಲ್ಲಿ,ಕಪಿಲ್‌1983ರಲ್ಲಿ ಮತ್ತು ಧೋನಿ 2011ರಲ್ಲಿ ತಲಾ ನಾಲ್ಕು ಬಾರಿ ಸೊನ್ನೆ ಸುತ್ತಿದ್ದರು.

ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್‌ ತಂಡದ ನಾಯಕರಾಗಿದ್ದಾಗ ಅತಿಹೆಚ್ಚು ಬಾರಿ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದ ದಾಖಲೆ ಇರುವುದು ನ್ಯೂಜಿಲೆಂಡ್‌ನ ಸ್ಟೀಫನ್‌ ಪ್ಲೆಮಿಂಗ್ (13) ಹೆಸರಿನಲ್ಲಿ. ಉಳಿದಂತೆ ತಲಾ ಹತ್ತು ಸಲ ಈ ರೀತಿ ಔಟಾಗಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಮತ್ತು ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ನ ಮೈಕ್‌ ಅಥರ್ಟನ್‌,ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನ್ಜೆ, ಭಾರತದ ಎಂ.ಎಸ್‌. ಧೋನಿ ಎಂಟು ಬಾರಿ ಶೂನ್ಯ ಸಂಪಾದಿಸಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ವಿರಾಟ್‌ ಕೊಹ್ಲಿ (ಪಿಟಿಐ ಚಿತ್ರ)

ಕೊಹ್ಲಿ 'ಔಟ್' ಚರ್ಚೆ
ಇನಿಂಗ್ಸ್‌ನ 30ನೇ ಓವರ್‌ನಲ್ಲಿ ಕ್ರೀಸ್‌ಗಿಳಿದ ಕೊಹ್ಲಿ, ನಾಲ್ಕು ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ಔಟಾದರು. ಎಜಾಜ್‌ ಎಸೆತವನ್ನುಕೊಹ್ಲಿ ಎಡಗಾಲು ಮುಂದಿಟ್ಟು ರಕ್ಷಣಾತ್ಮಕವಾಗಿ ಆಡಿದರು. ಚೆಂಡು ಪ್ಯಾಡ್‌ಗೆ ಬಡಿದ ಕಾರಣ, ನ್ಯೂಜಿಲೆಂಡ್ ತಂಡ ಔಟ್‌ಗಾಗಿ ಮನವಿ ಮಾಡಿತು. ಫೀಲ್ಡ್ ಅಂಪೈರ್‌ ಅನಿಲ್ ಚೌಧರಿ ಔಟ್ ತೀರ್ಪು ನೀಡಿದರು. ಆದರೆ, ಕೊಹ್ಲಿ ತಕ್ಷಣವೇ ಡಿಆರ್‌ಎಸ್‌ ತೆಗೆದುಕೊಂಡರು.

ಔಟ್‌ ಪರಿಶೀಲನೆಯ ರಿಪ್ಲೇ ವೇಳೆ ಚೆಂಡು ಕೂದಲೆಳೆ ಅಂತರದಲ್ಲಿ ಮೊದಲು ಬ್ಯಾಟ್‌ಗೆ ತಗುಲಿರುವುದು ಬಳಿಕ ಪ್ಯಾಡ್‌ಗೆ ತಾಕಿರುವುದು ಅಥವಾ ಒಂದೇ ಸಮಯದಲ್ಲಿ ಎರಡಕ್ಕೂ ಬಡಿದಿರುವುದು ಸೆರೆಯಾಗಿದೆ. ಆದರೆ, ಸಾಕಷ್ಟು ಬಾರಿ ರಿಪ್ಲೇ ಗಮನಿಸಿದ ಬಳಿಕವೂ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲು ಆಗದ ಕಾರಣ ಟಿವಿ ಅಂಪೈರ್‌ ವಿರೇಂದರ್ ಶರ್ಮಾ ಅವರುಫೀಲ್ಡ್‌ ಅಂಪೈರ್ ನೀಡಿದ್ದ ತೀರ್ಪನ್ನೇ ಉಳಿಸಿಕೊಳ್ಳುವಂತೆ ತಿಳಿಸಿದರು.‌

ಇದರಿಂದ ಕೊಹ್ಲಿ ಮಾತ್ರವಲ್ಲದೆ, ಕೋಚ್ ರಾಹುಲ್ ದ್ರಾವಿಡ್ ಅವರೂ ಅಚ್ಚರಿಗೊಂಡರು.

ಈ ತೀರ್ಪಿನ ಬಗ್ಗೆ ಹಲವು ಹಿರಿಯ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಕಂಡಿತವಾಗಿಯೂ ಔಟ್ ಆಗಿರಲಿಲ್ಲ. ನ್ಯೂಜಿಲೆಂಡ್ ಆಟದಲ್ಲಿ ಕಮ್‌ಬ್ಯಾಕ್ ಮಾಡಿರಬಹದು. ಆದರೆ, ಅವರು ವಿರಾಟ್ ಎಲ್‌ಬಿಡಬ್ಲ್ಯು ತೀರ್ಪಿನ ಲಾಭ ಪಡೆದಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ಚೆಂಡು ಮೊದಲು ಮೊದಲು ಬ್ಯಾಟ್‌ಗೆ ತಾಗಿತು ಎಂಬುದು ನನ್ನ ಅಭಿಪ್ರಾಯ. ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲು ಆಗದ ಕಾರಣ ಈ ತೀರ್ಪು ಬಂದಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಇದು ಸಾಮಾನ್ಯ ಪ್ರಜ್ಞೆ ಬಳಸಬೇಕಾದ ದೃಷ್ಟಾಂತ. ಎಲ್ಲರು ಹೇಳುವಂತೆ ಸಾಮಾನ್ಯ ಪ್ರಜ್ಞೆ ಸಾಮಾನ್ಯವಾಗಿ ಬಳಕೆಗೆ ಬರುವುದಿಲ್ಲ ಎಂದು ವಾಸೀಂ ಜಾಫರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು ಕೆಟ್ಟ ತೀರ್ಪುಗಳೂ ಆಟದ ಭಾಗವಾಗಿರುತ್ತವೆ. ಆದರೆ, ವಿರಾಟ್‌ ವಿರುದ್ಧ ಅವು ಬರುವುದು ಭಾರತ ತಂಡಕ್ಕೆ ಹಿನ್ನಡೆಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ಆರ್‌.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಪ್ರತಿಕ್ರಿಯೆಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.