
ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ, 'ಕಳೆದ ಎರಡು ಮೂರು ವರ್ಷಗಳಲ್ಲಿ ಈ ತರ ಆಡಲೇ ಎಲ್ಲ' ಎಂದು ಹೇಳಿದ್ದಾರೆ.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸತತ ಎರಡು ಶತಕ ಗಳಿಸಿದ್ದ (135, 102), ವಿಶಾಖಪಟ್ಟಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲೂ ಅಜೇಯ 65 ರನ್ ಗಳಿಸಿದ್ದರು.
ಅಲ್ಲದೆ ಸರಣಿಯಲ್ಲಿ ಒಟ್ಟು 302 ರನ್ ಗಳಿಸಿ ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪಂದ್ಯದ ಬಳಿಕ ಈ ಕುರಿತು ಕೇಳಿದಾಗ, 'ನಿಜವಾಗಿಯೂ ಮಾನಸಿಕವಾಗಿ ನಿರಾಳವಾಗಿದ್ದೇನೆ' ಎಂದು ಹೇಳಿದ್ದಾರೆ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಬಯಸಿದ ರೀತಿಯಲ್ಲಿ ಆಡಲು ಸಾಧ್ಯವಾಗಿರುವುದು ತುಂಬಾನೇ ತೃಪ್ತಿದಾಯಕವಾಗಿದೆ. ನನಗೆ ಮುಕ್ತವಾಗಿ ಆಡಲು ಸಾಧ್ಯವಾಗಿದೆ. ಬಹುಶಃ ಕಳೆದ ಎರಡು-ಮೂರು ವರ್ಷಗಳಿಂದ ಈ ರೀತಿ ಆಡಿರಲಿಲ್ಲ' ಎಂದು ತಿಳಿಸಿದ್ದಾರೆ.
'ಈ ರೀತಿ ಆಡಲು ಸಾಧ್ಯ ಎಂದು ನನಗೆ ತಿಳಿದಿತ್ತು. ತಂಡಕ್ಕೂ ಇದರಿಂದ ನೆರವಾಗುತ್ತದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆ ಇತ್ತು' ಎಂದು ವಿವರಿಸಿದ್ದಾರೆ.
'15, 16 ವರ್ಷ ಕ್ರಿಕೆಟ್ ಆಡಿದಾಗ ಕೆಲವೊಮ್ಮೆ ನಿಮ್ಮ ಬಗ್ಗೆ ಅನುಮಾನ ಮೂಡುವುದು ಸಹಜ. ಆದರೆ ಓರ್ವ ಆಟಗಾರನಾಗಿ ಉತ್ತಮವಾಗಿ ಆಡಲು ಗಮನ ಹರಿಸಿದ್ದೆ. ಇದು ತಾಳ್ಮೆಯ ಪರೀಕ್ಷೆಯು ಆಗಿದೆ. ಈಗಲೂ ತಂಡಕ್ಕಾಗಿ ಕೊಡುಗೆ ನೀಡಲು ಸಾಧ್ಯವಾಗಿರುವುದು ಸಂತಸ ತಂದಿದೆ' ಎಂದು ಹೇಳಿದ್ದಾರೆ.
'ಮುಕ್ತವಾಗಿ ಆಡುವಾಗ ನನ್ನಿಂದ ಸಿಕ್ಸರ್ ಹೊಡೆಯಲು ಸಾಧ್ಯ ಎಂದು ತಿಳಿದಿತ್ತು' ಎಂದು ಟೂರ್ನಿಯಲ್ಲಿ 12 ಸಿಕ್ಸರ್ ಗಳಿಸಿರುವ ಕೊಹ್ಲಿ ತಿಳಿಸಿದ್ದಾರೆ.
ಈ ನಡುವೆ ರಾಂಚಿಯಲ್ಲಿ ಗಳಿಸಿದ ಶತಕ ಹೆಚ್ಚು ವಿಶೇಷವಾಗಿತ್ತು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.