ADVERTISEMENT

ಟೆಸ್ಟ್ ಕ್ರಿಕೆಟ್‌ಗೆ ವಿದಾಯ; ಬಿಸಿಸಿಐಗೆ ಮಾಹಿತಿ ನೀಡಿದ ವಿರಾಟ್ ಕೊಹ್ಲಿ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮೇ 2025, 4:26 IST
Last Updated 10 ಮೇ 2025, 4:26 IST
<div class="paragraphs"><p>ವಿರಾಟ್‌ ಕೊಹ್ಲಿ</p></div>

ವಿರಾಟ್‌ ಕೊಹ್ಲಿ

   

ಪಿಟಿಐ ಚಿತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಇಂಗ್ಲೆಂಡ್‌ ವಿರುದ್ಧದ ಸರಣಿಗೂ ಮುನ್ನ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸಿರುವುದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದ್ದಾರೆ. ಆದರೆ, ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಅವರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ADVERTISEMENT

ಈ ಕುರಿತು 'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ಮತ್ತು 'ಇಂಡಿಯಾ ಟುಡೇ' ವರದಿ ಮಾಡಿವೆ.

ಐದು ಪಂದ್ಯಗಳ ಟೆಸ್ಟ್ ಸರಣಿಯು ಇಂಗ್ಲೆಂಡ್‌ನಲ್ಲಿ ಜೂನ್‌ 20ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಆಡುವ ಭಾರತ ತಂಡವನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ. ನಾಯಕರಾಗಿದ್ದ ರೋಹಿತ್‌ ಶರ್ಮಾ ಅವರು ಎರಡು ದಿನಗಳ ಹಿಂದಷ್ಟೇ ಈ ಮಾದರಿಗೆ ನಿವೃತ್ತಿ ಘೋಷಿಸಿರುವುದರಿಂದ ನಾಯಕನ ಆಯ್ಕೆ ಬಗ್ಗೆಯೂ ಚಿಂತನೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲೇ ವಿರಾಟ್‌ ವಿದಾಯದ ಕುರಿತು ಸುದ್ದಿಯಾಗಿದೆ.

'ಅವರು ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಿಂದ ಹಿಂದೆ ಸರಿಯುವುದಾಗಿ ಮಂಡಳಿಗೆ ತಿಳಿಸಿದ್ದಾರೆ. ಶೀಘ್ರದಲ್ಲೇ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಬೇಕಿರುವುದರಿಂದ ನಿರ್ಧಾರವನ್ನು ಪುನಃ ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ. ಅವರಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ' ಎಂದು ಮೂಲಗಳು ತಿಳಿಸಿರುವುದಾಗಿ 'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ಒಂದು ವೇಳೆ ಕೊಹ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗಕ್ಕೆ ಭಾರಿ ಹೊಡೆತ ಬೀಳಲಿದೆ. ಅಷ್ಟೇ ಅಲ್ಲದೆ, ಇದೀಗ ರೋಹಿತ್‌ ಅವರೂ ಹೊರನಡೆದಿರುವುದರಿಂದ ಅನುಭವಿ ಆಟಗಾರರ ಕೊರತೆ ಕಾಡಲಿದೆ.

ಕೊಹ್ಲಿ ಈಗಾಗಲೇ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

2011ರಲ್ಲಿ (ವೆಸ್ಟ್‌ ಇಂಡೀಸ್‌ ವಿರುದ್ಧ) ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಈವರೆಗೆ 123 ಪಂದ್ಯಗಳ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿರುವ ಅವರ ಬ್ಯಾಟ್‌ನಿಂದ 7 ದ್ವಿಶತಕ, 30 ಶತಕ, 31 ಅರ್ಧಶತಕಗಳು ಬಂದಿವೆ.

2014ರಿಂದ 2022ರವರೆಗೆ ಟೀಂ ಇಂಡಿಯಾದ ನಾಯಕತ್ವವನ್ನೂ ವಹಿಸಿಕೊಂಡಿದ್ದ ಕೊಹ್ಲಿ, ಈ ಮಾದರಿಯಲ್ಲಿ ಭಾರತದ ಅತ್ಯುತ್ತಮ ನಾಯಕ ಎನಿಸಿದ್ದಾರೆ. ಅವರ ನಾಯಕತ್ವದಲ್ಲಿ ಆಡಿದ 68 ಪಂದ್ಯಗಳಲ್ಲಿ ಭಾರತ 40ರಲ್ಲಿ ಜಯ ಸಾಧಿಸಿತ್ತು. 17ರಲ್ಲಿ ಸೋಲು ಕಂಡರೆ, ಉಳಿದ 11 ಡ್ರಾ ಆಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.