ADVERTISEMENT

ವಿರಾಟ್ ಕೊಹ್ಲಿ ಕ್ರಿಕೆಟ್‌ನ ಕ್ರಿಸ್ಟಿಯಾನೊ ರೊನಾಲ್ಡೊ: ಲಂಕಾ ಕ್ರಿಕೆಟಿಗ

ಪಿಟಿಐ
Published 30 ಮಾರ್ಚ್ 2022, 14:32 IST
Last Updated 30 ಮಾರ್ಚ್ 2022, 14:32 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಶ್ರೀಲಂಕಾ ಕ್ರಿಕೆಟಿಗ ಭಾನುಕ ರಾಜಪಕ್ಸ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ.

ಅಲ್ಲದೆ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಎಂದು ಹೊಗಳಿದ್ದಾರೆ.

ನನ್ನ ಪ್ರಕಾರ, ಕ್ರಿಕೆಟ್‌ನಲ್ಲಿ ಕೌಶಲ್ಯಕ್ಕೆ ಮೊದಲ ಆದ್ಯತೆ. ಆದರೆ ಆಧುನಿಕ ಕ್ರಿಕೆಟ್‌ನಲ್ಲಿ ದೀರ್ಘ ಸಮಯದವರೆಗೆ ಆಡಬೇಕಾದರೆ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.

ಈ ಹಿಂದೆ ಫಿಟ್‌ನೆಸ್ ಸಮಸ್ಯೆಯಿಂದಾಗಿ ಶ್ರೀಲಂಕಾ ತಂಡದಿಂದ 30 ವರ್ಷದ ಭಾನುಕಾ ಅವರನ್ನು ಕೈಬಿಡಲಾಗಿತ್ತು. ವರ್ಷಾರಂಭದಲ್ಲಿ ನಿವೃತ್ತಿ ಘೋಷಿಸಿದ್ದ ಭಾನುಕಬಳಿಕ ತಮ್ಮ ನಿರ್ಧಾರ ಬದಲಿಸಿದ್ದರು.

ಪ್ರಸ್ತುತ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಭಾನುಕ, ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ 22 ಎಸೆತಗಳಲ್ಲಿ43 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.

ಐಪಿಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಟೂರ್ನಿಯಾಗಿದ್ದು, ಸಹ ಆಟಗಾರರಿಂದ ಸಾಕಷ್ಟು ಕಲಿಯಲು ಸಾಧ್ಯವಾಗುತ್ತದೆ. ತಂಡದ ಹೊರಗಡೆ ವಿರಾಟ್ ಕೊಹ್ಲಿ ಅವರಿಂದ ಫಿಟ್‌ನೆಸ್ ಬಗ್ಗೆ ಸಲಹೆಗಳನ್ನು ಪಡೆಯಬಹುದಾಗಿದೆ. ಫಿಟ್‌ನೆಸ್ ವಿಚಾರದಲ್ಲಿ ಅವರು (ಕೊಹ್ಲಿ) ವಿಭಿನ್ನ ಹಂತದಲ್ಲಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಪಾಲಿಗೆ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಕ್ರಿಸ್ಟಿಯಾನೊ ರೊನಾಲ್ಡೊ. ನಿಸ್ಸಂಶವಾಗಿಯೂ ಅವರು ಮಾಡುತ್ತಿರುವ ಪರಿಶ್ರಮಕ್ಕೆ ಫಲಿತಾಂಶವನ್ನು ಕಾಣಬಹುದಾಗಿದೆ. ಫಿಟ್‌ನೆಸ್ ಹಾಗೂ ಕೌಶಲ್ಯದ ವಿಚಾರಕ್ಕೆ ಬಂದಾಗ ನೀವು ಅವರನ್ನು ಯಾರ ಜೊತೆಗೂ ಬೇಕಾದರೂ ಹೋಲಿಸಬಹುದು. ಅವರಿಂದ ಬಹಳಷ್ಟು ಕಲಿಯುವುದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.