ADVERTISEMENT

IND vs AUS T20: ಡಿಆರ್‌ಎಸ್ ನಿರಾಕರಣೆ; ಗರಂ ಆದ ವಿರಾಟ್ ಕೊಹ್ಲಿ

ಏಜೆನ್ಸೀಸ್
Published 8 ಡಿಸೆಂಬರ್ 2020, 10:58 IST
Last Updated 8 ಡಿಸೆಂಬರ್ 2020, 10:58 IST
ಅಂಪೈರ್ ಬಳಿ ಸ್ಪಷ್ಟನೆ ಕೇಳುತ್ತಿರುವ ವಿರಾಟ್ ಕೊಹ್ಲಿ
ಅಂಪೈರ್ ಬಳಿ ಸ್ಪಷ್ಟನೆ ಕೇಳುತ್ತಿರುವ ವಿರಾಟ್ ಕೊಹ್ಲಿ   

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸಿಡ್ನಿಯಲ್ಲಿ ನಡೆಯುತ್ತಿರುವ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ವಿಚಿತ್ರ ಪ್ರಸಂಗವೊಂದು ಘಟಿಸಿತ್ತು. ಡಿಆರ್‌‌ಎಸ್ ರಿವ್ಯೂ ಪಡೆಯಲು ಅಂಪೈರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗರಂ ಆದರು.

ಟಾಸ್ ಗೆದ್ದ ಭಾರತ ನಾಯಕ ವಿರಾಟ್ ಕೊಹ್ಲಿ ಮೊದಲು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕಳೆದ ಪಂದ್ಯದಲ್ಲಿಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಮ್ಯಾಥ್ಯೂ ವೇಡ್ ಮಗದೊಮ್ಮೆ ಅಬ್ಬರಿಸಿದರು. ಅಲ್ಲದೆ ಭಾರತೀಯ ಪಾಳೇಯದಲ್ಲಿ ಆತಂಕವನ್ನು ಮೂಡಿಸಿದರು.

ಸತತ ಎರಡನೇ ಅರ್ಧಶತಕ ಬಾರಿಸಿದ ವೇಡ್, ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಈ ಮಧ್ಯೆ ಟಿ ನಟರಾಜನ್ ಎಸೆದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವಲ್ಲಿ ಯಶಸ್ವಿಯಾದರು. ಆದರೆ ಅಂಪೈರ್ ನಾಟೌಟ್ ಘೋಷಿಸಿದರು.

ನಿಗದಿತ 15 ಸೆಕೆಂಡುಗಳ ಸಮಯದಲ್ಲಿ ಭಾರತವು ಡಿಆರ್‌ಎಸ್ ಮನವಿಯನ್ನು ಪಡೆದುಕೊಳ್ಳಬೇಕಿತ್ತು. ನಾಯಕ ವಿರಾಟ್ ಕೊಹ್ಲಿ ಡಿಆರ್‌ಎಸ್ ತೆಗೆದುಕೊಳ್ಳಲು ವಿಳಂಬ ಮಾಡಿದ ಕಾರಣ ಥರ್ಡ್ ಅಂಪೈರ್ ಮನವಿಯನ್ನು ಪುರಸ್ಕರಿಸಲಿಲ್ಲ. ಇದರಿಂದ ಗರಂ ಆದ ವಿರಾಟ್ ಕೊಹ್ಲಿ, ಅಂಪೈರ್ ಬಳಿ ತೆರಳಿ ಸ್ಪಷ್ಟನೆಯನ್ನು ಕೇಳಿದರು.

ಡಿಆರ್‌ಎಸ್ ನಿಯಮದಂತೆ 15 ಸೆಕೆಂಡು ಸಯಮದಲ್ಲಿ ನಾಯಕನಿಗೆ ಮನವಿ ಮಾಡುವ ಅವಕಾಶವಿರುತ್ತದೆ. ಆದರೆ ದೊಡ್ಡ ಪರದೆಯಲ್ಲಿ ರಿಪ್ಲೇ ವೀಕ್ಷಣೆಯ ಬಳಿಕ ವಿರಾಟ್ ಕೊಹ್ಲಿ ಮನವಿ ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಯಿತು.

ಮೈದಾನದ ದೊಡ್ಡ ಪರದೆಯಲ್ಲಿ ತಕ್ಷಣ ರಿಪ್ಲೇ ಪ್ಲೇ ಮಾಡಿರುವುದು ಇಷ್ಟೆಲ್ಲ ಗೊಂದಲ ಸೃಷ್ಟಿಸಲು ಕಾರಣವಾಯಿತು. ರಿಪ್ಲೇನಲ್ಲಿ ಔಟ್ ಎಂಬುದು ಸ್ಪಷ್ಟವಾಗಿ ಎದ್ದು ಕಾಣಿಸುತ್ತಿತ್ತು.ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಪಂಡಿತ ಹಾಗೂ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ, 'ಸ್ಟ್ಯಾಂಡರ್ಡ್ ಪ್ರೋಟೋಕಾಲ್ ಪ್ರಕಾರ, ಉಲ್ಲೇಖಿತ ಸಮಯ ಮುಗಿಯುವ ವರೆಗೂ ದೊಡ್ಡ ಪರದೆಯಲ್ಲಿ ರಿಪ್ಲೇ ತೋರಿಸುವ ಹಾಗಿಲ್ಲ. ಆದರೆ ಟೈಮರ್ ಇಲ್ಲದಿರುವುದರಿಂದ ಭಾರತೀಯ ತಂಡ ತಡವಾಗಿ ಡಿಆರ್‌ಎಸ್ ಮನವಿ ಮಾಡಿದೆಯೇ ಎಂಬುದು ತಿಳಿದು ಬಂದಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.