
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳ ಆಟಗಾರರು ಇಂದೋರ್ ತಲುಪಿದ್ದಾರೆ. ಈ ನಡುವೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸುದ್ದಿ ಸಂಸ್ಥೆ 'ಎಎನ್‌ಐ' ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿದ್ದು, ವಿರಾಟ್ ಮತ್ತು ಕುಲದೀಪ್ ಯಾದವ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ.
ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದು ಸಂತೋಷ ತಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದೆ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.
ಇಬ್ಬರೂ ಕ್ರಿಕೆಟಿಗರು ಶನಿವಾರ ಬೆಳಿಗ್ಗೆ 4 ಗಂಟೆಗೆ ಮಹಾಕಾಳೇಶ್ವರ ದೇವಾಲಯವನ್ನು ತಲುಪಿದ್ದು, ಭಸ್ಮಾರತಿಯಲ್ಲಿ ಭಾಗವಹಿಸಿದ್ದರು. ಅವರು ಸುಮಾರು ಎರಡು ಗಂಟೆಗಳ ಕಾಲ ನಂದಿ ಸಭಾಂಗಣದಲ್ಲಿ ಕುಳಿತು ಆರತಿಯನ್ನು ವೀಕ್ಷಿಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ವಿರಾಟ್ ಕೊಹ್ಲಿ ಅವರನ್ನು ಸನ್ಮಾನಿಸಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಏಕದಿನ ಪಂದ್ಯ ಭಾನುವಾರ ಜರುಗಲಿದೆ. ಈ ಪಂದ್ಯವು ಸರಣಿ ನಿರ್ಣಾಯಕ. ಅಂದರೆ 3 ಪಂದ್ಯಗಳ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಗೆದ್ದರೆ, 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ದಾಖಲಿಸಿತ್ತು. ಇದೀಗ 3ನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯನ್ನು ಜಯಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.