ADVERTISEMENT

IPL 2025 | ನೂರನೇ ಅರ್ಧಶತಕ ಬಾರಿಸಿದ ಕೊಹ್ಲಿ; ಟಿ20 ಕ್ರಿಕೆಟ್‌ನಲ್ಲಿ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2025, 16:30 IST
Last Updated 13 ಏಪ್ರಿಲ್ 2025, 16:30 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

ಚಿತ್ರ: @RCBTweets

ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಬ್ಯಾಟರ್‌, 'ರನ್‌ ಮಷಿನ್‌' ಖ್ಯಾತಿಯ ವಿರಾಟ್‌ ಕೊಹ್ಲಿ ಅವರು, ಟಿ20 ಕ್ರಿಕೆಟ್‌ನಲ್ಲಿ ನೂರು ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು.

ADVERTISEMENT

ಜೈಪುರದ ಸವಾಯಿ ಮಾನ್‌ ಸಿಂಗ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಇಂದು (ಭಾನುವಾರ) ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ಅವರು, ಈ ಸಾಧನೆ ಮಾಡಿದ ಭಾರತದ ಏಕೈಕ ಹಾಗೂ ವಿಶ್ವದ ಎರಡನೇ ಕ್ರಿಕೆಟಿಗ ಎನಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್ಸ್‌ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 174 ರನ್‌ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿ, ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು.

ಆರಂಭಿಕ ಬ್ಯಾಟರ್‌ಗಳಾದ ಫಿಲ್‌ ಸಾಲ್ಟ್‌, ಕೊಹ್ಲಿ ಗಳಿಸಿದ ಅಮೋಘ ಅರ್ಧಶತಕಗಳು ಹಾಗೂ ದೇವದತ್ತ ಪಡಿಕ್ಕಲ್‌ ಅವರ ಬಿರುಸಿನ ಬ್ಯಾಟಿಂಗ್‌ ಬಲದಿಂದ 18.3 ಓವರ್‌ಗಳಲ್ಲೇ ಒಂದು ವಿಕೆಟ್‌ಗೆ 175 ರನ್‌ ಬಾರಿಸಿತು.

ಸಾಲ್ಟ್‌, ಕೇವಲ 33 ಎಸೆತಗಳಲ್ಲಿ 65 ರನ್ ಸಿಡಿಸಿದರು. 45 ಎಸೆತಗಳನ್ನು ಎದುರಿಸಿದ ಕೊಹ್ಲಿ, 65 ರನ್‌ ಬಾರಿಸಿ ಅಜೇಯವಾಗಿ ಉಳಿದರು. ಪಡಿಕ್ಕಲ್‌ 28 ಎಸೆತಗಳಲ್ಲಿ 40 ರನ್‌ ಗಳಿಸಿ ಕೊಹ್ಲಿಯೊಂದಿಗೆ ಸೇರಿ, ಜಯದ ಲೆಕ್ಕ ಚುಕ್ತಾ ಮಾಡಿದರು.

125 ಅಂತರರಾಷ್ಟ್ರೀಯ ಪಂದ್ಯಗಳು, ಐಪಿಎಲ್‌ನಲ್ಲಿ 258 ಪಂದ್ಯಗಳು ಸೇರಿದಂತೆ ಈ ಮಾದರಿಯಲ್ಲಿ ಒಟ್ಟು 405 ಪಂದ್ಯಗಳನ್ನು ಆಡಿರುವ ಕೊಹ್ಲಿ, ಒಟ್ಟು 109 ಬಾರಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಇದರಲ್ಲಿ 100 ಅರ್ಧಶತಕ ಹಾಗೂ 9 ಶತಕಗಳಿವೆ.

ಡೇವಿಡ್‌ ವಾರ್ನರ್‌ ಮಾತ್ರವೇ ಅತಿಹೆಚ್ಚು ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿಗಿಂತ ಮುಂದಿದ್ದಾರೆ. ಅವರ ಬ್ಯಾಟ್‌ನಿಂದ 108 ಅರ್ಧಶತಕ ಬಂದಿವೆ.

ಉಳಿದಂತೆ ಪಾಕಿಸ್ತಾನದ ಬಾಬರ್ ಅಜಂ (90), ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ (88) ಮತ್ತು ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌ (86) ಕೊಹ್ಲಿಯ ನಂತರದ ಸ್ಥಾನಗಳಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.